ಜಾತಿ ಗಣತಿ; ಕಾಂಗ್ರೆಸ್, ಪ್ರತಿಪಕ್ಷಗಳ ನಡುವೆ ಮುಂದುವರಿದ ಜಟಾಪಟಿ|Caste census

dk - 2025-04-10T201726.294
Published on

ಬೆಂಗಳೂರು: ಜಾತಿ ಗಣತಿ ವರದಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಜಟಾಪಟಿ ಮುಂದುವರಿದಿದೆ(Caste census; tussle continues between Congress and opposition parties). ಈ ವರದಿ ಬಗ್ಗೆ ಚರ್ಚಿಸಲೆಂದೇ ಏ.17 ರಂದು ಸರ್ಕಾರ ವಿಶೇಷ ಸಚಿವ ಸಂಪುಟ ಸಭೆ ಕರೆದಿದೆ.

ಈ ನಡುವೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಕಾಂಗ್ರೆಸ್ ಸಚಿವರು ವರದಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಲು ಸೋಮವಾರ ಮಹತ್ವದ ಸಭೆ ಕರೆದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಾತಿಗಣತಿ ವಿಚಾರ ನನಗೆ ಗೊತ್ತಿಲ್ಲ, ಕ್ಯಾಬಿನೆಟ್‌ನಲ್ಲಿ ಏನು ಡಿಸ್ಕಸ್ ಮಾಡ್ತಾರೆ ಗೊತ್ತಿಲ್ಲ. ರಿಪೋರ್ಟ್ ಕೈಗೆ ಸಿಕ್ಕರೆ ಏನಾದರೂ ಹೇಳಬಹುದು. 17ರ ಕ್ಯಾಬಿನೆಟ್‌ನಲ್ಲಿ ಸ್ಪಷ್ಟ ನಿರ್ಧಾರ ಬಂದ ನಂತರ ನಾನು ಪ್ರತಿಕ್ರಿಯೆ ಮಾಡಬಹುದು ಎಂದು ಹೇಳಿದ್ದಾರೆ. ಜಾತಿಗಣತಿ ವಿಚಾರವಾಗಿ ಕೆಲ ಕಾಂಗ್ರೆಸ್‌ ನಾಯಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಲೂ ನಿರಾಕರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಜಾತಿ ಜನ ಗಣತಿ ವರದಿಯ ಪ್ರತಿ ಬಂದಿದೆ. ಅವರವರ ಸಮಾಜ ಅವರು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ನಾವು ಯಾಕೆ ಟೀಕೆ ಮಾಡಬೇಕು. ಅವರ ಅವರ ಹಕ್ಕು. ಅವರು ಪ್ರತಿಪಾದನೆ ಮಾಡಲಿ. ಸಿಎಂ ಈಗಾಗಲೇ ಹೇಳಿದ್ದಾರೆ. ಸದನದಲ್ಲೆ ಚರ್ಚೆ ಮಾಡಲು ಅವಕಾಶ ಕೊಡುತ್ತೇವೆ ಅಂತಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ 6ನೇ ಸ್ಥಾನ ವಿಚಾರ ನನಗೆ ಗೊತ್ತಿದೆ. ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೇನೆ. ಎಲ್ಲರಿಗೂ ನ್ಯಾಯ ಕೂಡಿಸಬೇಕಾಗಿರುವುದು ನನ್ನ ಡ್ಯೂಟಿ. ನನ್ನ ಧ್ವನಿ, ನನ್ನ ದೇಹ, ನನ್ನ ಪದ್ಧತಿ, ನನ್ನ ಸಂಕಲ್ಪ ಇದೆ. ನಾನು ಎಲ್ಲವನ್ನೂ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಎಲ್ಲವನ್ನು ಕೂಲಕಂಶವಾಗಿ ಪರಿಗಣಿಸಿ ವರದಿ ಮಾಡಿದ್ದಾರೆ. ಅಸಮಾನತೆ ತೊಡೆದುಹಾಕಬೇಕು, ಸಮಸಮಾಜ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ಈ ತರಹದ ಅಧ್ಯಯನ ಮುಖ್ಯವಾಗಿದೆ. ಸ್ವತಂತ್ರ ಬಂದಾಗ 35 ಕೋಟಿ ಜನಸಂಖ್ಯೆ ಇತ್ತು. ಈಗ 140 ಕೋಟಿ ಜನಸಂಖ್ಯೆ ಆಗಿದೆ. ಅದರ ಆಧಾರದ ಮೇಲೆ ರಾಜ್ಯ, ಕೇಂದ್ರ ಸರ್ಕಾರಗಳು ಯೋಜನೆಗಳನ್ನು ನೀಡಬೇಕು. ಯಾವ ಯಾವ ಸಮಾಜಕ್ಕೆ ಏನೇನು ಸಿಗಬೇಕು ಅದನ್ನು ಕೊಡಬೇಕು. ಈ ವರದಿ ಯಾರ ಪರವಾಗಿಯೂ ಇಲ್ಲ, ವಿರೋಧವೂ ಇಲ್ಲ. ಏ.17 ರಂದು ಮತ್ತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಮೀಸಲಾತಿ ಹೆಚ್ಚಳ, ವರದಿ ಶಿಪಾರಸುಗಳನ್ನು ಅಧ್ಯಯನ ಮಾಡುತ್ತೇವೆ. ವೈಜ್ಞಾನಿಕವಾಗಿ ವರದಿ ಆಗಿದೆ. ಕಾಂಗ್ರೆಸ್ ಸಂವಿಧಾನದ ಆಶಯಗಳ ಪರವಾಗಿದೆ, ಪೂರಕವಾಗಿದೆ.

ಬಿಜೆಪಿಯವರು ದುರಾದೃಷ್ಟ ಅಂದಿರುವುದು ಅವರಿಂದ ಅದನ್ನು ಬಿಟ್ಟು ಬೇರೆ ಎನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮಂಡಲ ಕಮೀಷನ್ ವರದಿ ಜಾರಿ ಆದಾಗ ಕಮಂಡಲ ಹಿಡಿದುಕೊಂಡು ಯಾತ್ರೆ ಮಾಡಿದ್ದರು. ಬಿಜೆಪಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ಅಸಮಾನತೆ ಇದೆ ಅಲ್ಲವೆ? ಸಂಪತ್ತು ಎಲ್ಲರಿಗೂ ಹಂಚಿಕೆ ಆಗಿದೆಯಾ? ರಾಜಕೀಯ ಪ್ರಾತಿನಿಧ್ಯಕ್ಜೆ ಈ ವರದಿಗೂ ಸಂಬಂಧವಿಲ್ಲ. ಯಾವ ಸಮುದಾಯಕ್ಕೂ ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡುವ ಉದ್ದೇಶ ಇದಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net