

ಬೆಂಗಳೂರು: ಜಾತಿ ಗಣತಿ ವರದಿಯು ಸಿದ್ದರಾಮಯ್ಯ ಅವರಿಂದ ಸಿದ್ದರಾಮಯ್ಯ ಅವರಿಗಾಗಿ ಸಿದ್ದರಾಮಯ್ಯನವರೇ ಮಾಡಿಕೊಂಡ ವರದಿ(Caste Census Report; Nikhil Kumaraswamy's sarcasm) ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಲೇವಡಿ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸೋರಿಕೆ ಆಗಿರುವ ಈ ವರದಿಯಲ್ಲಿ ಇವೆ ಎನ್ನಲಾದ ಅಂಕಿ-ಅಂಶಗಳನ್ನು ಒಮ್ಮೆ ನೋಡಿದರೆ ಈ ವರದಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಕ್ಷೇಮಕ್ಕಾಗಿ ತಯಾರು ಮಾಡಿಸಿಕೊಂಡಿರುವ ವರದಿ ಎಂದು ವಾಗ್ದಾಳಿ ನಡೆಸಿದರು.
ನಮ್ಮ ರಾಜ್ಯದಲ್ಲಿ ಏಳು ಕೋಟಿ ಕನ್ನಡಿಗರು ಇದ್ದಾರೆ. ಸಮೀಕ್ಷೆ ನಡೆಸಿದವರು ಎಷ್ಟು ಮನೆಗಳಿಗೆ ಹೋಗಿದ್ದಾರೆ ಎಂಬ ದಾಖಲೆಗಳು ಇರಬೇಕು. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿರುವ ನಮ್ಮ ತಂದೆಯ ಮನೆಗೆ ಯಾರೂ ಬಂದು ಸಮೀಕ್ಷೆ ಮಾಡಿಲ್ಲ. ಅದೇ ರೀತಿ ನಮ್ಮ ಅಜ್ಜ, ಈ ದೇಶದ ಮಾಜಿ ಪ್ರಧಾನಿಗಳು. ಅವರ ಮನೆಗೂ ಯಾರೂ ಭೇಟಿ ಕೊಟ್ಟು ಸಮೀಕ್ಷೆ ಮಾಡಿಲ್ಲ. ಇಂಥ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಲ್ಲೆ. ನನಗೆ ಗಣತಿ ನಡೆದಿರುವ ಬಗ್ಗೆಯೇ ಅನುಮಾನವಿದೆ. ಗಣತಿ ವೈಜ್ಞಾನಿಕವಾಗಿ, ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ಮಾಡಬೇಕಿತ್ತು. ಆ ರೀತಿ ಆಗಿಲ್ಲ ಎಂದು ಆರೋಪಿಸಿದರು.
ಜಾತಿ ಗಣತಿ ವರದಿಯಲ್ಲಿವೆ ಎನ್ನಲಾದ ಕೆಲ ಅಂಕಿ-ಅಂಶ ಸೋರಿಕೆಯಾಗಿದೆ.ಈ ಅಂಕಿ ಅಂಶಗಳನ್ನು ಹೊರ ಹಾಕಿರುವವರು ಅಥವಾ ಸೋರಿಕೆ ಮಾಡಿದವರು ಯಾರು? ವರದಿ ಅಧಿಕೃತವಾಗಿ ಇನ್ನೂ ಬಹಿರಂಗ ಆಗಿಲ್ಲ. ಅಂಕಿ-ಅಂಶಗಳು ಎಲ್ಲ ಕಡೆ ತೇಲಾಡುತ್ತಿವೆ. ಆದರೆ, ಇದು ಅನಧಿಕೃತ ಮಾಹಿತಿ. ಊಹಾಪೋಹದ ಅಂಕಿ-ಅಂಶಗಳು. ಇದು ಸರ್ಕಾರದ ಕಡೆಯಿಂದಲೇ ಸೋರಿಕೆ ಆಗಿರುವ ಅನಧಿಕೃತ ಅಂಕಿ ಅಂಶಗಳು ಎನ್ನುವುದು ನನ್ನ ಅಭಿಪ್ರಾಯ. ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಚರ್ಚೆ ಬರಬಹುದೆಂದು ನೋಡೋಣ ಎಂದು ಸಿದ್ದರಾಮಯ್ಯ ಅವರು ಟೆಸ್ಟ್ ರನ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂತರಾಜು ಆಯೋಗದ ವರದಿಗೆ 150 ಕೋಟಿ ಖರ್ಚು ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಆಯೋಗ ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ಹಾಗಾದರೆ, ಇಷ್ಟು ಮೊತ್ತವನ್ನು ಎಲ್ಲಿ ಖರ್ಚು ಮಾಡಿದ್ದಾರೆ. ಯಾರ ಮನೆಗೆ ಹೋಗಿದ್ದಾರೆ? ಯಾಕೆ ಇಷ್ಟು ಹಣ ಖರ್ಚು ಮಾಡಿದ್ದಾರೆ? ಲೆಕ್ಕ ಬೇಕಲ್ಲವೇ? ಇದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.