

ಬೆಂಗಳೂರು: ಜಾತಿ ಜನಗಣತಿಗೆ ವಿರೋಧಿಗಳಲ್ಲ. ನಿರ್ಲಕ್ಷಿತ ಸಮುದಾಯಗಳು ಅಭಿವೃದ್ಧಿಯ ಮುಖ್ಯ ವಾಹಿನಿಗೆ ಬರಬೇಕು ಈ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ ಈಗ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ ವರದಿಯೇ ಬೋಗಸ್ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.
ವಿಧಾನಸೌಧದಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಈಗ ಮಂಡನೆಯಾದ ದತ್ತಾಂಶಗಳ ವರದಿ ನಕಲಿ ಎಂಬುದಕ್ಕೆ ಪುರಾವೆಯಿದೆ. ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಯವರು 5-10-2021ರಂದು ಸರ್ಕಾರಕ್ಕೆ ಬರದಿದ್ದ ಪತ್ರದ ಪ್ರಕಾರ ಮೂಲ ಅಥವಾ ಹಸ್ತಪ್ರತಿಯೇ ಇಲ್ಲ. ಸೀಲ್ಡ್ ಪೆಟ್ಟಿಗೆಯನ್ನು ಮಹಜರು ಮಾಡಿ ಅಧ್ಯಕ್ಷ, ಸದಸ್ಯರ ಸಮಕ್ಷಮ ತೆರೆದಾಗ ಸೀಲ್ಡ್ ಪೆಟ್ಟಿಗೆಯಲ್ಲಿಟ್ಟಿದ್ದ ಪ್ರತಿಯ ಮೇಲೆ ಸದಸ್ಯ ಕಾರ್ಯದರ್ಶಿ ಸಹಿಯೇ ಇಲ್ಲವೆಂಬುದನ್ನು ತಿಳಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಸಮೀಕ್ಷಾ ವರದಿಯ ಮೂಲ ಪ್ರತಿ ಬಗ್ಗೆ ವಿಧಾನ ಪರಿಷತ್ ನಲ್ಲಿ ಕೇಳಿದ ಪ್ರಶ್ನೆಗೆ ಅಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಮೂಲ ಪ್ರತಿ ಕಳೆದು ಹೋಗಿರುವುದನ್ನು ಖಚಿತಪಡಿಸಿದ್ದಾರೆ. ಅಂದ ಮೇಲೆ ಜಯಪ್ರಕಾಶ್ ಹೆಗ್ಡೆಯವರು ಯಾವ ದತ್ತಾಂಶಗಳನ್ನು ಪರಿಷ್ಕರಿಸಿ ವರದಿ ಕೊಟ್ಟರು ? ನಕಲಿ ವರದಿ ವಿಧಾನಸೌಧ, ಅಸಲಿ ವರದಿ ಸಿದ್ದರಾಮಯ್ಯ ಮನೆಯಲ್ಲಿದೆ ಎಂದು ದೂರಿದರು.
ಸಮೀಕ್ಷೆ ನಡೆಸಿದ ಮೂಲ ವರದಿ ಪ್ರತಿ ಕಾಣೆಯಾಗಿದ್ದರ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು. ಸಮೀಕ್ಷೆಯ ದಾಖಲೆಗಳು, 165 ಕೋಟಿ ರೂ ಖರ್ಚು ಮಾಡಿದ್ದು ಹೇಗೆಂಬುದು ? ಈ ತನಿಖೆಯ ವ್ಯಾಪ್ತಿಗೆ ತರಬೇಕು. ನಕಲಿ ವರದಿಯನ್ನೇ ಹಲವು ಸಚಿವರು ವೈಜ್ಞಾನಿಕ, ನಿಖರವೆಂದು ಹಾಸ್ಯಾಸ್ಪದವೆಂದು ಆರ್.ಅಶೋಕ್ ಗೇಲಿ ಮಾಡಿದರು.
ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಸದಾ ತಮ್ಮ ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ. ಸಿಎಂ ಕುರ್ಚಿಗೆ ಸಂಕಷ್ಟ ಬಂದಾಗಲೆಲ್ಲ ಹೊರ ತೆಗೆಯುತ್ತಾರೆ. ಈಗ ವರದಿ ಮಂಡನೆ ಬಳಿಕ ಅವರ ಲೆಕ್ಕಾಚಾರವೇ ಉಲ್ಟಾ ಆಗಿದೆ. ದತ್ತಾಂಶಗಳ ಬಗ್ಗೆ ಪರಿಶಿಷ್ಟ ಜಾತಿ, ಅನೇಕ ಹಿಂದುಳಿದ ಸಮುದಾಯಗಳು ಆಕ್ಷೇಪಿಸಿವೆ. ಮನೆಯಲ್ಲೇ ಕುಳಿತು ತಮಗೆ ತೋಚಿದ ರೀತಿಯಲ್ಲಿ ಬರೆದುಕೊಂಡರೆ ಹೀಗೆಯೇ ಆಗುತ್ತದೆ ಎಂದು ಕುಟುಕಿದರು.