ಮೂಲ ಪ್ರತಿಯಿಲ್ಲದೆ ಜಾತಿ ಜನಗಣತಿ ವರದಿ ಸಿದ್ಧ ಅಸಾಧ್ಯ: ಸಚಿವ ಪರಮೇಶ್ವರ್ | BJP allegation serious

g parameshwara
Published on

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ (ಜಾತಿ ಜನಗಣತಿ)ಗಳ ವರದಿಯ ಮೂಲ ಪ್ರತಿ ನಾಪತ್ತೆಯಾಗಿದೆ ಎಂಬ ಪ್ರತಿಪಕ್ಷ ಬಿಜೆಪಿ ಆರೋಪದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಮೂಲ ಪ್ರತಿಯಿಲ್ಲದೆ ದತ್ತಾಂಶಗಳ ವರದಿ ಸಿದ್ಧಪಡಿಸಿ ಸಲ್ಲಿಸುವುದು ಅಸಾಧ್ಯ ಎಂದು ಸಮಜಾಯಿಷಿ ನೀಡಿದ ಅವರು, ಬಿಜೆಪಿಯವರು ಎಲ್ಲ ವಿಷಯಗಳಲ್ಲಿ ಆರೋಪ ಮಾಡುತ್ತಾರೆ. ಆದರೆ ವರದಿಯ ಮೂಲ ಪ್ರತಿಯೇ ನಾಪತ್ತೆಯಾಗಿದೆ ಎಂಬ ಆರೋಪ ಗಂಭೀರವಾದದ್ದು ಎಂದರು.

ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈವರೆಗೆ ಹತ್ತು ಸಮಿತಿಗಳಾಗಿವೆ. ಕೆಲವು ಸಮಿತಿಗಳು ಸಮೀಕ್ಷೆ ಮಾಡಿವೆ. ಕೆಲವು ಸ್ಯಾಂಪಲ್ ಡೇಟಾ ಸಂಗ್ರಹಿಸಿ ವರದಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಂಪೂರ್ಣ ಡೇಟಾ ಸಂಗ್ರಹಿಸಿ ವರದಿ ನೀಡಿದ್ದು, ಇದಕ್ಕೆ ಹೆಚ್ಚು ಮಹತ್ವ ಬರುತ್ತದೆಯೇ ವಿನಃ, ಬೇರೆ ಯಾವುದಕ್ಕು ಬರುವುದಿಲ್ಲ ಎಂದರು.

ಸ್ಥಿತಿಗತಿ ಅವಲೋಕನ

ನಾವು ಮೂಲವಾಗಿ ನೋಡಬೇಕಿರುವುದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ವರದಿ ಕೊಡಬೇಕು ಎನ್ನುವುದು. ಆ ದೃಷ್ಟಿನಲ್ಲಿ ಸ್ವಾಭಾವಿಕವಾಗಿ ಜನಗಣತಿಯು ಆಗಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಸಮುದಾಯಗಳು ಹಿಂದುಳಿದಿದ್ದಾವೆಯೇ ಅಥವಾ ಮುಂದುವರಿದಿವೆಯೇ ಎಂಬುದನ್ನು ಅಧ್ಯಯನ ಮಾಡಿ ಹೇಳಬೇಕಾದರೆ, ಆ ಜಾತಿಯ ಸಂಖ್ಯೆಗಳನ್ನು ನೋಡಬೇಕಾಗುತ್ತದೆ. ಆ ಆಧಾರದ ಮೇಲೆ ವಿಶ್ಲೇಷಣೆಗಳಾಗುತ್ತಿವೆ. ಕೆಲವರು ಸರಿ ಇದೆ ಎನ್ನುತ್ತಾರೆ. ಕೆಲವರು ಸರಿ ಇಲ್ಲ ಎನ್ನುತ್ತಾರೆ.

ಚರ್ಚೆ, ವಿಶ್ಲೇಷಣೆ, ತಪ್ಪು-ಒಪ್ಪುಗಳನ್ನು ಅಧ್ಯಯನ ಮಾಡಿ ಆನಂತರ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಕ್ಯಾಬಿನೆಟ್‌ನಲ್ಲಿ ಪೂರ್ಣ ಪ್ರಮಾಣದ ಚರ್ಚೆಯಾಗಲಿದ್ದು, ಕೆಲವು ಸಚಿವರ ಅಭಿಪ್ರಾಯಗಳನ್ನು ಪರಿಗಣಿಸಲಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಪ್ರತಿಕ್ರಿಯೆಗೆ ನಕಾರ

ನಿವೃತ್ತ ಡಿಜಿಪಿ ಓಂ ಪ್ರಕಾಶ ಹತ್ಯೆ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಏನೆಲ್ಲ ಮಾಹಿತಿ ಸಿಗುತ್ತದೆ ಎಂಬುದನ್ನು ನೋಡಬೇಕಿದೆ. ಒಳ್ಳೆಯ ಅಧಿಕಾರಿ, ಒಳ್ಳೆಯ ವ್ಯಕ್ತಿ. ಈ ರೀತಿಯಾಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಕರಣದ ತನಿಖೆಯಾಗುವವರೆಗೂ ಘಟನೆಗೆ ಇದೇ ಕಾರಣ ಎಂದು ಹೇಳಲು ಆಗುವುದಿಲ್ಲ. ನಿರ್ಧಿಷ್ಟವಾಗಿ ಹೇಳಲು ಬರುವುದಿಲ್ಲ. ಕೌಟುಂಬಿಕ ಕಾರಣದ ಬಗ್ಗೆ ಹಿಂದೆ ದೂರು ಕೊಟ್ಟಿರುವುದನ್ನು ತನಿಖೆಯಲ್ಲಿ ಪರಿಶೀಲಿಸುತ್ತಾರೆ. ಎಲ್ಲವನ್ನು ಸಮಗ್ರವಾಗಿ ತನಿಖೆ ಮಾಡುವವರೆಗೂ ಯಾವುದನ್ನು ಹೇಳಲು ಈಗಲೇ ಹೇಳಲಾಗುವುದಿಲ್ಲ ಎಂದರು.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿಗೆ ಬಳಸಿದ ಶಸ ಕುರುಹು ಪತ್ತೆ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಗಂಭೀರವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಇಂತಹ ಘಟನೆಗಳ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net