ವೋಟ್ ಬ್ಯಾಂಕ್‌ಗಾಗಿ ಜಾತಿ ಜನಗಣತಿ: ಆರ್.ಅಶೋಕ್ ಆರೋಪ | Conspiracy of division

R Ashok
Published on

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಜಾತಿ ಜನಗಣತಿ ವರದಿ ಜಾರಿಗೆ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.

ಸುದ್ದಿಗಾರರಿಗೆ ಭಾನುವಾರ ಆರ್.ಅಶೋಕ್ ಪ್ರತಿಕ್ರಿಯಿಸಿ, ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಸಿದ್ದರಾಮಯ್ಯ ಜಾತಿ ಗಣತಿ ಮಾಡಿಸಿದ್ದಾರೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ, ವೈಜ್ಞಾನಿಕವಾಗಿ ವರದಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಒಕ್ಕಲಿಗರಲ್ಲಿ ಕೆಲವು ಉಪ ಜಾತಿಗಳನ್ನು ವಿಂಗಡಿಸಿದರೆ, ಮುಸ್ಲಿಮರಲ್ಲೇ ವಿವಿಧ ಜಾತಿಗಳಿದ್ದು ಬೇರೆ ಮಾಡಿಲ್ಲ. ಕಾಂಗ್ರೆಸ್‌ಗೆ ಹೆಚ್ಚು ಮತ ನೀಡುವವರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಿ, ಒಕ್ಕಲಿಗರು, ಲಿಂಗಾಯತರು ಮತ್ತು ದಲಿತರಿಗೆ ನಾಮ ಹಾಕಲಾಗಿದೆ ಎಂದು ಆರೋಪಿಸಿದರು.

ಒಡೆಯುವ ಕುತಂತ್ರ

ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿ ಲಿಂಗಾಯತರು ಮೊದಲ, ಒಕ್ಕಲಿಗರು ಎರಡನೇ, ದಲಿತರು ಮೂರನೇ ಸ್ಥಾನದಲ್ಲಿದ್ದಾರೆ ಎಂದಿತ್ತು. ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ.

ಪಕ್ಷ, ಜಾತಿ, ಧರ್ಮ ಒಡೆಯುವುದರಲ್ಲಿ ಸಿದ್ದರಾಮಯ್ಯ ನಂಬರ್ ಒನ್ ಆಗಿದ್ದಾರೆ. ಈಗ ಕಾಂಗ್ರೆಸ್ ಒಡೆಯುವ ಕುತಂತ್ರ ಹೂಡಿರುವ ಸಾಧ್ಯತೆಯಿದೆ. ಒಕ್ಕಲಿಗರು ಹಾಗೂ ಲಿಂಗಾಯತರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಇಂತಹ ವರದಿಯನ್ನು ಸಚಿವರು ಒಪ್ಪಿದರೂ ಆಯಾ ಸಮುದಾಯದವರು ಒಪ್ಪುವುದಿಲ್ಲ. ಇದು, ಕಾಂಗ್ರೆಸ್‌ನಲ್ಲೇ ದಂಗೆ ಎಬ್ಬಿಸಲಿದೆ. ಒಕ್ಕಲಿಗ ಸ್ವಾಮೀಜಿಯವರು ಸಭೆ ಕರೆದು ಚರ್ಚಿಸಲಿದ್ದು, ಇದೇ ರೀತಿ ಬೇರೆ ಸಮುದಾಯದವರೂ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net