ಕಾಂಗ್ರೆಸ್‌ನಿಂದ ಜಾತಿ ಆಧಾರದ ರಾಜಕೀಯ; ನಿಖಿಲ್ ಕುಮಾರಸ್ವಾಮಿ

NI
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಜೆಡಿಎಸ್ ರಾಜ್ಯ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಆದ ಮೇಲೆ ಕಾಂಗ್ರೆಸ್ ನಾಯಕರು ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಕಂಡರೆ ಅವರಿಗೆ ಭಯ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರನ್ನು ತಪ್ಪಿತಸ್ಥರಾಗಿ ಮಾಡಬೇಕೆಂದು ಕಾಂಗ್ರೆಸ್ ಸರ್ಕಾರ ಹೊರಟಿದೆ. ಡಿನೋಟಿಫಿಕೇಶನ್ ವಿಚಾರವಾಗಿ ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.2015 ರಲ್ಲಿ ಈ ಪ್ರಕರಣ ಆಗಿದೆ. ಇದಕ್ಕೂ ಕುಮಾರಸ್ವಾಮಿ ಅವರಿಗೂ ಸಂಬಂಧವಿಲ್ಲ. ಮುಡಾ ಕೇಸ್‌ಗೂ ಗಂಗೇನಹಳ್ಳಿ ಕೇಸ್‌ಗೂ ಸಂಬಂಧವೇ ಇಲ್ಲ. ಸುಮ್ಮನೆ ಅವರ ತಪ್ಪು ಮುಚ್ಚಿಕೊಳ್ಳಲು ತಿರುಚೋ ಕೆಲಸ ಆಗುತ್ತಿದೆ ಎಂದು ಹರಿಹಾಯ್ದರು. ಶಾಸಕ ಮುನಿರತ್ನ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಮುನಿರತ್ನ ಕೇಸ್ ತನಿಖೆ ಆಗುತ್ತಿದೆ. ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಲಿ. ಮುನಿರತ್ನ ಧ್ವನಿ ಕುರಿತು ಎ್ಎಸ್‌ಎಲ್ ವರದಿ ಬರಬೇಕು. ಅವರ ಧ್ವನಿಯೋ ಅಲ್ಲವೋ, ಅಂತ ಸತ್ಯ ಹೊರಗೆ ಬರಬೇಕು ಎಂದರು.

ಕಾನೂನಿಗಿಂತ ಯಾರು ದೊಡ್ಡವರು

ಕಾನೂನಿಗಿಂತ ಯಾರು ದೊಡ್ಡವರು ಅಲ್ಲ. ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು.. ಯಾದಗಿರಿ ಪಿಎಸ್‌ಐ ಪರಶುರಾಮ್ ಕೇಸ್ ಸರ್ಕಾರ ಹೇಗೆ ಮುಚ್ಚಿ ಹಾಕಲು ಪ್ರಯತ್ನ ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ವಾಲ್ಮೀಕಿ ಹಗರಣ ಕೇಸ್‌ನಲ್ಲಿ ನಾಗೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಈ ಸರ್ಕಾರ ಹೇಗೆ ತನಿಖೆ ಮಾಡಿತು ಎಂಧು ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದರು.

ಜಾತಿ ಆಧಾರದಲ್ಲಿ ರಾಜಕೀಯ

ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಜಾತಿ ಆಧಾರದಲ್ಲಿ ರಾಜಕೀಯ ಮಾಡುವ ಪ್ರಯತ್ನ ಮಾಡುತ್ತಿದೆ. ಇಲ್ಲಿ ಒಕ್ಕಲಿಗ, ಓಬಿಸಿ, ಲಿಂಗಾಯತ, ಮುಸ್ಲಿಂ ಟ್ಯಾಗ್ ಹಾಕಿ ರಾಜಕೀಯ ಮಾಡೋದು ಸೂಕ್ತ ಅಲ್ಲ, ಯಾವುದೋ ಸಮುದಾಯ ಒಲೈಕೆ ಮಾಡಿಕೊಳ್ಳಲು ಈ ರೀತಿ ಟಾರ್ಗೆಟ್ ರಾಜಕೀಯ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ:

ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಬಿಜೆಪಿ-ಜೆಡಿಎಸ್ ನಾಯಕರು ದೆಹಲಿಯಲ್ಲಿ ಮಾತಾಡಿದ್ದಾರೆ. ಇನ್ನು ಚುನಾವಣೆ ಘೋಷಣೆ ಆಗಿಲ್ಲ. ಉಪ ಚುನಾವಣೆ ದಿನಾಂಕ ಘೋಷಣೆ ಆಗಲಿ. ಎನ್‌ಡಿಎ ಅಭ್ಯರ್ಥಿ ಚನ್ನಪಟ್ಟಣದ ಕ್ಷೇತ್ರದಲ್ಲಿ ಅಭ್ಯರ್ಥಿ ಆಗುತ್ತಾರೆ ಎಂದು ತಿಳಿಸಿದರು.

ಅತಿ ಶೀಘ್ರದಲ್ಲೇ ಗುಡ್ ನ್ಯೂಸ್

ಚನ್ನಪಟ್ಟಣದಲ್ಲಿ ಜೆಡಿಎಸ್ ನಗರಸಭೆ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿರೋ ವಿಚಾರದ ಬಗ್ಗೆ ಮಾತನಾಡಿದ ಅವರು, ಶುಕ್ರವಾರ ನಾನು ನಗರಪಾಲಿಕೆ ಸದಸ್ಯರ ಜೊತೆ ಮಾತುಕತೆ ಮಾಡಿದ್ದೇನೆ. ಸಾಕಷ್ಟು ಜನ ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ. ಅತಿ ಶೀಘ್ರದಲ್ಲೇ ಕೆಲವು ಗುಡ್ ನ್ಯೂಸ್ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜೆಡಿಎಸ್ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ಅಭಿಯಾನಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಶರವಣ, ಬೆಂಗಳೂರು ಉಸ್ತುವಾರಿ ಜಗದೀಶ್ ಡಿ.ನಾಗರಾಜಯ್ಯ, ಯಲಹಂಕ ಮುನೇಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net