ಸಾರಿಗೆ ನಿಗಮಗಳ ವಸ್ತುಸ್ಥಿತಿ ಅಧ್ಯಯನ; ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿ ಮೂರು ತಿಂಗಳ ಗಡುವು

xcvxcvsd
Published on

ಬೆಂಗಳೂರು: ನಷ್ಟಪೀಡಿತ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ ಕಾಯಕಲ್ಪ ನೀಡಲೆಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ‘ವಸ್ತುಸ್ಥಿತಿ ಅಧ್ಯಯನ ಸಮಿತಿ’ ರಚಿಸಿ ಸರ್ಕಾರ ಆದೇಶಿಸಿದೆ.

ಕೆಎಸ್​ಆರ್​ಟಿಸಿ, ಬಿಎಂ ಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಸದ್ಯದ ಸ್ಥಿತಿಗತಿ ಬಗ್ಗೆ ಸಮಿತಿ ಅಧ್ಯಯನ ನಡೆಸಲಿದೆ. ಕಾಯಕಲ್ಪ ನೀಡುವುದಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡುವ ಜವಾಬ್ದಾರಿಯು ಇದೇ ತಂಡದ್ದಾಗಿದೆ. ಸಮಿತಿಯ ಅಧ್ಯಯನಕ್ಕೆ ಅಗತ್ಯವಿರುವ ಅಧಿಕಾರಿಗಳ ಸಹಕಾರ ನೀಡುವುದನ್ನು ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಖಚಿತಪಡಿಸಬೇಕು. ಅಧ್ಯಯನಕ್ಕಾಗಿ ಸಮಿತಿಯು ಕೆಎಸ್​ಆರ್​ಟಿಸಿ ಇತರ ಕಚೇರಿ, ಕೇಂದ್ರಗಳಿಗೆ ಭೇಟಿ, ಹೊರ ರಾಜ್ಯಕ್ಕೂ ಹೋಗಿಬರಲು ಅವಕಾಶ ಕಲ್ಪಿಸಿದ್ದು, ಸಾರಿಗೆ ಇಲಾಖೆ ಈ ಕುರಿತು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಪ್ರಯಾಣಿಕರಿಗೆ ಸಾರಿಗೆ ಸೇವೆಯಲ್ಲಿ ನಿಗಮಗಳು ಅವಿಭಾಜ್ಯ ಅಂಗವಾಗಿವೆ. ಆದರೂ ನಷ್ಟದ ಸುಳಿಗೆ ಸಿಲುಕಿರುವುದು ಸರ್ಕಾರದ ಖಜಾನೆಗೆ ಹೊರೆ, ಆಡಳಿತ ನಡೆಸುವವರಿಗೂ ತಲೆಬಿಸಿ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪರಿಣತರನ್ನು ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ತಿಳಿಸಿದ್ದರು.ನಂತರ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ವಸ್ತುಸ್ಥಿತಿ ಅಧ್ಯಯನ ಸಮಿತಿ ರಚಿಸಲು ಒಪ್ಪಿಗೆ ನೀಡಿದ್ದು, ಜವಾಬ್ದಾರಿ ಹೊತ್ತ ಎಂ.ಆರ್.ಶ್ರೀನಿವಾಸಮೂರ್ತಿ ಸಮಿತಿಯು ಅಧ್ಯಯನ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವ ಗಡುವು ವಿಧಿಸಲಾಗಿದೆ.ಅಗತ್ಯವೆನಿಸಿದರೆ ವಿಷಯ ತಜ್ಞರು ಮತ್ತು ಸಲಹೆಗಾರರ ನೆರವು ಬಳಸಿಕೊಳ್ಳುವುದಕ್ಕೂ ಸಮಿತಿಗೆ ಅವಕಾಶ ಕಲ್ಪಿಸಿದ್ದು, ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಅಧ್ಯಯನಕ್ಕೆ ಪರಿಗಣಿಸ ಬೇಕಾದ ಅಂಶಗಳು? ಪುನರ್ ಸಂಘಟನೆ, ಆಡಳಿತದಲ್ಲಿ ಬದಲಾವಣೆ ಸಹಿತ ನಾಲ್ಕು ನಿಗಮಗಳ ಪುನರ್ ರಚನೆ? ನಾಲ್ಕೂ ನಿಗಮಗಳ ಒಡೆತನದ ಜಮೀನು, ಕಟ್ಟಡ ಇತ್ಯಾದಿ ಸ್ಥಿರಾಸ್ತಿಗಳ ಮುಖೇನ ಆದಾಯ ಸಂಗ್ರಹಣೆ ? ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಡೀಕರಣ? ಸಾರಿಗೆ ಕ್ಷೇತ್ರದ ಕಾರ್ಯಕ್ಷಮತೆ ಹೆಚ್ಚುವ ನಿಟ್ಟಿನಲ್ಲಿ ಸಮಿತಿಯು ಗುರುತಿಸುವ ಇತರ ಯಾವುದೇ ಅಂಶಗಳು ಒಳಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net