ಡೀನ್​ ಕೈಯಿಂದ ನಾಂದೇಡ್ ಆಸ್ಪತ್ರೆಯ​ ಟಾಯ್ಲೆಟ್​ ಸ್ವಚ್ಛಗೊಳಿಸಿದ ಶಿವಸೇನಾ ಸಂಸದನ ವಿರುದ್ಧ ಪ್ರಕರಣ ದಾಖಲು

MP Hemant Patil
Published on

ಮುಂಬೈ: ಕಳೆದ 48 ಗಂಟೆಗಳಲ್ಲಿ 31 ರೋಗಿಗಳು ಸಾವಿಗೀಡಾಗುವ ಮೂಲಕ ಮಹಾರಾಷ್ಟ್ರದ ನಾಂದೇಡ್​ ಆಸ್ಪತ್ರೆ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಇದರ ನಡುವೆ ಆಸ್ಪತ್ರೆಯ ಡೀನ್​ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿವಸೇನಾ ಸಂಸದ ಹೇಮಂತ್​ ಪಾಟೀಲ್​ ವಿರುದ್ಧ ದೂರು ದಾಖಲಾಗಿದೆ.

ಪಾಟೀಲ್​ ವಿರುದ್ಧ ಆಸ್ಪತ್ರೆಯ ಡೀನ್ ಎಸ್​.ಆರ್​. ವಾಕೋಡ್​​ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬುಧವಾರ ಎಫ್​ಐಆರ್​ ದಾಖಲಿಸಿದ್ದಾರೆ. ಸರ್ಕಾರಿ ನೌಕರನ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದ ಮತ್ತು ಮಾನಹಾನಿ ಮಾಡಿದ ಆರೋಪದ ಮೇಲೆ ಪಾಟೀಲ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಂಸದ ಪಾಟೀಲ್​ ಅವರು ಮುಖ್ಯಮಂತ್ರಿ ಏಕನಾಥ್​ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದಾರೆ. ಎರಡು ದಿನದಲ್ಲಿ 31 ರೋಗಿಗಳು ಮೃತಪಟ್ಟ ಘಟನೆ ತಿಳಿದ ಕೂಡಲೇ ಪಾಟೀಲ್​ ಅವರು ನಾಂದೇಡ್‌ನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಡೀನ್​ ವಾಕೋಡ್​ ಅವರಿಗೆ ಪೊರಕೆ ನೀಡಿ ಕೊಳಕು ಶೌಚಾಲಯ ಮತ್ತು ಗೋಡೆಯ ಮೂತ್ರಾಲಯಗಳನ್ನು ಸ್ವಚ್ಛಗೊಳಿಸುವಂತೆ ಹೇಳಿದರು. ಬಳಿಕ ಡೀನ್​ ಶೌಚಾಲಯವನ್ನು ಸ್ವಚ್ಛಗೊಳಿಸಿದರು ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪಾಟೀಲ್​ ವಿರುದ್ಧ ಸರ್ಕಾರಿ ನೌಕರನ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಮಾನಹಾನಿ, ಕ್ರಿಮಿನಲ್ ಬೆದರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚಿಗೆ 48 ಗಂಟೆಗಳಲ್ಲಿ 31 ಸಾವುಗಳು ಸಂಭವಿಸಿದ್ದು, ಸ್ಥಳೀಯ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಗೆ ಭೇಟಿ ನೀಡುವ ಮುನ್ನವೇ ಆಸ್ಪತ್ರೆಗೆ ಆಗಮಿಸಿದ ಪಾಟೀಲ್​ ಅವರು, ಕೊಳಚೆ ಸ್ಥಿತಿಯಲ್ಲಿರುವ ಶೌಚಾಲಯವನ್ನು ಗಮನಿಸಿದರು. ಅದನ್ನು ಸ್ವಚ್ಛಗೊಳಿಸುವಂತೆ ಆಸ್ಪತ್ರೆಯ ಡೀನ್‌ಗೆ ಸೂಚಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2ರ ನಡುವೆ ಸಂಭವಿಸಿದ ಸಾವುಗಳಿಗೆ ಆಸ್ಪತ್ರೆಯ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು” ಎಂದು ಪಾಟೀಲ್ ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net