

ಬೆಂಗಳೂರು: ಶಾಲಾ-ಕಾಲೇಜಿನಲ್ಲಿ ಹಿಜಾಬ್ ಕುರಿತು ತೀರ್ಪು ನೀಡಿರುವ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮುಸ್ಲಿಂ ಸಂಘಟನೆ ಕೊಲೆ ಬೆದರಿಕೆವೊಡ್ಡಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲೇ ವಿಧಾನಸೌಧ ಠಾಣೆಯಲ್ಲಿ ಸಂಘಟನೆ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ವಿಡಿಯೋ ಆಧರಿಸಿ ವಕೀಲರಾದ ಸುಧಾ ಕಟ್ವ, ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಇದರ ಅನ್ವಯ, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಪೊಲೀಸರು ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 506 (ಬೆದರಿಕೆ), 501(1) (ಮಾನಹಾನಿ), 503 (ಕ್ರಿಮಿನಲ್ ಬೆದರಿಕೆ), 109 (ಪ್ರಚೋದನೆ), 504 (ಶಾಂತಿ ಭಂಗ), 505 (ಸಾರ್ವಜನಿಕ ಕಿಡಿಗೇಡಿತನ) ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಜಾಬ್ ಪ್ರಕರಣ ಸಂಬಂಧ ಇತ್ತೀಚೆಗೆ ಹೈಕೋರ್ಟ್ ತೀರ್ಪು ನೀಡಿತ್ತು. ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮೂಲದ ತೌಹೀದ್ ಜಮಾತ್ ಸಂಘಟನೆ ಮುಖಂಡ ಆರ್. ರೆಹ್ಮತ್‌ವುಲ್ಲಾ ಎಂಬಾತ ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಿಜಾಬ್ ಉಲ್ಲೇಖಿಸಿ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆವೊಡ್ಡಿದ್ದಾರೆ. ಹಿಜಾಬ್ ಕುರಿತು ತೀರ್ಪು ನೀಡಿರುವ ‘ನ್ಯಾಯಮೂರ್ತಿಗಳು ಕೊಲೆಯಾದಲ್ಲಿ ಅವರೇ ನೇರ ಹೊಣೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.
ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಪತ್ರ: ಹಿಂದುಪರ ಸಂಘಟನೆ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಸಹ, ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಮನವಿ ಪತ್ರ ಬರೆದಿದ್ದಾರೆ. ಕ್ಯಾಂಪಸ್ ಫ್ರೆಂಟ್ ಆಫ್ ಇಂಡಿಯಾ ಸಂಘಟನೆ ಮುಖಂಡರು ತೀರ್ಪು ಸಂವಿಧಾನಕ್ಕೆ ವಿರುದ್ಧವಾಗಿದೆ ಹೇಳಿದ್ದಾರೆ. ಇಸ್ಲಾಂ ಸಂಘಟನೆ ಅಮೀರ್- ಇ-ಶರಿತ್ ಎಂಬ ಸಂಘಟನೆ ತೀರ್ಪು ಖಂಡಿಸಿ ಬಂದ್ ಆಚರಣೆ ಮಾಡಿದೆ. ಹೊಸಪೇಟೆಯಲ್ಲಿ ಹಿಜಾಬ್ ಧರಿಸುವುದನ್ನು ಸಮರ್ಥಿಸಿ ಗೋಡೆಗಳ ಮೇಲೆ ಬರಹ ಬರೆಯಲಾಗಿದೆ. ಈ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.