

ಯಾದಗಿರಿ: ಕರೊನಾ ಸಂದರ್ಭವನ್ನು ಅನೇಕರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವವರು ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವು ಮೆಡಿಕಲ್ ಶಾಪ್ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸರ್ ಬೆಲೆಗಳನ್ನು ವಿಪರೀತ ಹೆಚ್ಚು ಮಾಡಿದ್ದಾರೆ.
ಈಗ ಇನ್ನೊಂದೆಡೆ ನಕಲಿ ವೈದ್ಯರ ಕಾಟ ಶುರುವಾಗಿದೆ. ಕರೊನಾ ವೈರಸ್ ಸೋಂಕು ಗುಣಮಾಡುವ ಮಾತ್ರೆಗಳೆಂದು ನಕಲಿ ಹೋಮಿಯೋಪಥಿಕ್ ಮಾತ್ರೆಗಳನ್ನು ಹಂಚಿದ ಡುಪ್ಲಿಕೇಟ್ ವೈದ್ಯನ ವಿರುದ್ಧ ಯಾದಗಿರಿಯ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ ಈ ನಕಲಿ ವೈದ್ಯನಿಗೆ ಸಹಕಾರ ನೀಡಿದ ಆರೋಪದಡಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷನ ವಿರುದ್ಧವೂ ಕೇಸ್ ದಾಖಲಾಗಿದೆ.
ಯಾದಗಿರಿಯ ಗುರುಮಿಠಕಲ್ ತಾಲೂಕಿನ ಗುಂಜುನುರೂನಲ್ಲಿ ಘಟನೆ ನಡೆದಿದೆ. ಶರಣಗೌಡ ಮಾಲಿಪಾಟೀಲ್ ಎಂಬಾತ ತಾನು ಸರ್ಕಾರಿ ವೈದ್ಯನೆಂದು ಹೇಳಿಕೊಂಡು ನಕಲಿ ಮಾತ್ರೆಗಳನ್ನು ಹಂಚಿದ್ದಾನೆ. ಆತ ನೀಡಿದ ಮಾತ್ರೆಯ ಪ್ಯಾಕೆಟ್ ಮೇಲೆ ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಫೋಟೋ ಕೂಡ ಇತ್ತು. ಈ ರೀತಿ ಮಾತ್ರೆ ಹಂಚುವಂತೆ ಜಿಲ್ಲಾಡಳಿತ ಯಾರಿಗೂ ಹೇಳಿರಲಿಲ್ಲ. ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.