ಪತ್ನಿಯನ್ನು ಕಚ್ಚಿದ್ದಕ್ಕೆ ನೆರೆಮನೆಯ ಸಾಕು ನಾಯಿಯನ್ನು ಹೊಡೆದು ಕೊಂದ ಅಬಕಾರಿ ಅಧಿಕಾರಿ

Excise Officer
Published on

ಕೊಚ್ಚಿ: ಪತ್ನಿಯನ್ನು ಕಚ್ಚಿದ್ದಕ್ಕೆ ನೆರೆಮನೆಯವರ ಸಾಕು ನಾಯಿಯನ್ನು ಹೊಡೆದು ಕೊಂದಿದ್ದಲ್ಲದೆ, ಮಾಲಕಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕೇರಳದ ಅಬಕಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರತೀಕಾರ

ಆರೋಪಿ ಅಧಿಕಾರಿಯನ್ನು ನೆಡುಮಾಂಗಡ ಮೂಲದ ಪ್ರಶಾಂತ್​ ಎಂದು ಗುರುತಿಸಲಾಗಿದೆ. ಕಾರ್ಯಕ್ರಮವೊಂದಕ್ಕೆ ನೆರೆಮನೆಯವರನ್ನು ಕರೆಯಲೆಂದು ಪ್ರಶಾಂತ್​ ಪತ್ನಿ ರಾಜಲಕ್ಷ್ಮೀ ತೆರಳಿದ್ದಾಗ ಸಾಕು ನಾಯಿ ದಾಳಿ ನಡೆಸಿ, ಅವರ ಎರಡೂ ಕೈಗಳನ್ನು ಕಚ್ಚಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನೆರೆಮನೆಗೆ ತೆರಳಿದ ಪ್ರಶಾಂತ್​, ಕಬ್ಬಿಣದ ಸಲಾಕೆಯಿಂದ ಹೊಡೆದು ನಾಯಿಯನ್ನು ಕೊಂದು ಹಾಕಿದರು.

ಮುರಿದ ಹಲ್ಲು

ನಾಯಿ ಹತ್ಯೆಯ ಬಳಿಕ ಮಾಲಕಿ ಆದಿತ್ಯ ರಶ್ಮಿ ಅವರ ಮೇಲೂ ಪ್ರಶಾಂತ್​ ಹಲ್ಲೆ ಮಾಡಿದ್ದಾರೆ. ಈ ವೇಳೆ ರಶ್ಮಿ ಅವರ ಹಲ್ಲು ಮುರಿದಿದೆ. ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ಘಟನೆ ಏಪ್ರಿಲ್​ 20ರ ಮಧ್ಯಾಹ್ನ 2.30ರ ಸುಮಾರಿಗೆ ಸಂಭವಿಸಿದ್ದು, ಇದೀಗ ಪ್ರಶಾಂತ್​ ವಿರುದ್ಧ ರಶ್ಮಿ ಪ್ರಕರಣ ದಾಖಲಾಗಿದೆ.

ಪ್ರಶಾಂತ್ ಅಬಕಾರಿ ಇಲಾಖೆಯಲ್ಲಿ ಪ್ರೊಬೇಷನ್​​ನಲ್ಲಿದ್ದಾರೆ. ಪ್ರಶಾಂತ್ ವಿರುದ್ಧ ಶ್ವಾನವನ್ನು ಕೊಂದು, ಮಹಿಳೆಗೆ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಶಾಂತ್​ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net