ಗುಂಡು ಹಾರಿಸಿಕೊಂಡು ಕಾರ್ಪೆಂಟರ್ ಆತ್ಮಹತ್ಯೆ

Published on

ವಿರಾಜಪೇಟೆ : ಹೊರವಲಯದ ಕೆ.ಬೋಯಿಕೇರಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮರಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಡಿಕೇರಿ ತಾಲೂಕು ಐಯ್ಯಂಗೇರಿ ಸಣ್ಣ ಪುಲಿಕೋಟು ಗ್ರಾಮದ ನಿವಾಸಿ ಬಿ.ಪಿ.ಅನಿಲ್ ಕುಮಾರ್(40) ಆತ್ಮಹತ್ಯೆ ಮಾಡಿಕೊಂಡರು. ಮೂಲತಃ ಐಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮ ನಿವಾಸಿಯಾಗಿದ್ದ ಅನಿಲ್ ಕುಮಾರ್ ಮರಗೆಲಸ ಮಾಡಿಕೊಂಡಿದ್ದ. ಕುಟುಂಬ ನಿರ್ವಹಣೆಗೆಂದು ಅನಿಲ್ ಕುಮಾರ್ ತನ್ನ ಅಣ್ಣ ಹಾಗೂ ತಾಯಿಯೊಂದಿಗೆ ಮಡಿಕೇರಿ ನಗರದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಅನಿಲ್ 2ನೇ ಅಣ್ಣ ಬಿ.ಪಿ.ಬೆಳ್ಯಪ್ಪ ಅವಿವಾಹಿತನಾಗಿದ್ದು, ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ ಕೋವಿ ರಿಪೇರಿ ಅಂಗಡಿ ಇಟ್ಟುಕೊಂಡಿದ್ದರು. ಮೃತ ಅನಿಲ್ ಸಹ ಅವಿವಾಹಿತನಾಗಿದ್ದು, ಕುಡಿತದ ದಾಸನಾಗಿದ್ದ. ತನ್ನ ಅಣ್ಣ ಹಾಗೂ ತಾನು ಮದುವೆಯಾಗದಿರುವ ಬಗ್ಗೆ ಮನೆಯವರ ಜತೆ ಆಗಾಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದ ಎನ್ನಲಾಗಿದೆ.

ಭಾನುವಾರ ರಾತ್ರಿ 9.30 ಕ್ಕೆ ಮನೆಗೆ ಬಂದ ಅನಿಲ್‌ಕುಮಾರ್ ಕೈಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳುವ ಮುನ್ನ ತನ್ನ ಕೋಣೆಗೆ ತೆರಳಿ ತನ್ನ ಬಳಿ ಇದ್ದ ಒಂಟಿ ನಳಿಕೆಯ ಕೋವಿಯಿಂದ ಕುತ್ತಿಗೆ ಭಾಗಕ್ಕೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಿಣಾಮ ತಲೆ ಭಾಗ ಛೀದ್ರವಾಗಿದೆ. ಅಣ್ಣ ಹಾಗೂ ತಾಯಿ ಓಡಿಬಂದು ರೂಂ. ತೆರೆದು ನೋಡಿದಾಗ ಅನಿಲ್ ರಕ್ಷದ ಮಡುವಿನಲ್ಲಿ ಬಿದ್ದಿದ್ದ. ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದರು. ಕುಟುಂಬಸ್ಥರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅನಿಲ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net