ಸಂಪಾದಕೀಯ| ಎಚ್ಚರಿಕೆಯ ಹೆಜ್ಜೆ ಅಗತ್ಯ

Ind Pak
Published on

ಲಡಾಖ್ ಗಡಿಯಲ್ಲಿ ಘರ್ಷಣೆಗೆ ಕಾರಣವಾಗಿ ಉದ್ವಿಗ್ನ ಸ್ಥಿತಿ ಸೃಷ್ಟಿಸಿದ್ದ ಚೀನಾ ಸೇನಾ ಮಟ್ಟದ ಮಾತುಕತೆಯ ನಂತರ ಸೇನೆಯನ್ನು ಹಿಂಪಡೆದಿದೆ. ಇದರ ಬೆನ್ನಲ್ಲೇ ಭಾರತ-ಪಾಕಿಸ್ತಾನ ಗಡಿಯಲ್ಲಿ ಕದನವಿರಾಮ ಘೋಷಿಸಿರುವುದು ಸಮಾಧಾನದ ಸಂಗತಿ. ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಉದ್ದಕ್ಕೂ ಗುಂಡಿನ ಚಕಮಕಿಯನ್ನು ನಿಲ್ಲಿಸಲು ಮತ್ತು ಕದನವಿರಾಮ ಕುರಿತ ಎಲ್ಲ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಮತ್ತು ಪಾಕಿಸ್ತಾನ ಒಪ್ಪಿದ್ದು, ಇದು ಫೆಬ್ರವರಿ 24ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಗಡಿಯಲ್ಲಿ ಸುಸ್ಥಿರ ಶಾಂತಿ ಸ್ಥಾಪನೆ ಮತ್ತು ಸೌಹಾರ್ದದ ವಾತಾವರಣ ನಿರ್ವಿುಸಲು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಉಭಯ ದೇಶಗಳು ಬಯಸಿವೆ.

ಭಾರತ-ಪಾಕ್ ನಡುವೆ 2003ರಲ್ಲಿ ಕದನ ವಿರಾಮ ಏರ್ಪಟ್ಟಿತ್ತಾದರೂ, ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿರಲಿಲ್ಲ. ಪಾಕ್ ಕದನವಿರಾಮ ಉಲ್ಲಂಘನೆಗೆ ಭಾರತ ದಿಟ್ಟ ಪ್ರತ್ಯುತ್ತರ ನೀಡುತ್ತಿತ್ತು. ಈ ರೀತಿಯ ಗುಂಡಿನ ಚಕಮಕಿಯಿಂದ ಗಡಿ ಭಾಗದ ಗ್ರಾಮಗಳಲ್ಲಿ ಸಾವು-ನೋವಿನ ಜತೆಗೆ, ಆಸ್ತಿ ನಷ್ಟ ಸಂಭವಿಸುತ್ತಿತ್ತು. ಗಡಿಯಲ್ಲಿ ಶಾಂತಿ ಸ್ಥಾಪಿಸುವುದು ಆದ್ಯತೆಯಾಗಬೇಕು ಎಂಬುದು ನಿಜವೇ. ಮತ್ತು ಈ ನಿಟ್ಟಿನಲ್ಲಿ ಭಾರತ ಹಲವು ಮಹತ್ವದ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. ಆದರೆ, ಇಲ್ಲಿ ಪ್ರಶ್ನೆ ಇರುವುದು ಪಾಕ್​ನ್ನು ಹೇಗೆ ನಂಬುವುದು? ಪಾಕ್​ನ ಆಂತರಿಕ ಸ್ಥಿತಿ ಬಿಗಡಾಯಿಸಿದೆ, ಸಾಲ ಹೆಚ್ಚಾಗಿ ಹಣಕಾಸಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇಸ್ಲಾಂ ಜಗತ್ತಿನ ಪ್ರಮುಖ ದೇಶಗಳಾದ ಸೌದಿ ಅರೇಬಿಯಾ, ಯುಎಇ ಈಗ ಪಾಕ್ ಜತೆ ಇಲ್ಲ. ಪಾಕ್​ನಿಂದ ಭಯೋತ್ಪಾದನೆ ರಫ್ತು ನಡೆಯುತ್ತಿದೆ ಎಂಬ ವಾಸ್ತವಾಂಶವನ್ನು ಅಂತಾರಾಷ್ಟ್ರೀಯ ವಲಯವೂ ಮನಗಂಡಿದೆ. ಹೀಗಾಗಿ, ಅನಿವಾರ್ಯವಾಗಿಯಾದರೂ ಅದು ಶಾಂತಿಮಾರ್ಗಕ್ಕೆ ಮರಳಬೇಕಿದೆ. ಈ ಹಿಂದೆ ಪಾಕಿಸ್ತಾನವೇ ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸಿದ, ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ ಅಸಂಖ್ಯ ನಿದರ್ಶನಗಳಿವೆ. ಇಡೀ ಜಗತ್ತು ಕರೊನಾ ಸಂಕಷ್ಟದ ವಿರುದ್ಧ ಹೋರಾಡುತ್ತಿದ್ದರೂ ಪಾಕ್ ಗಡಿಯಲ್ಲಿ ಅಶಾಂತಿ ಸೃಷ್ಟಿಸಲು, ಭಯೋತ್ಪಾದಕರನ್ನು ನುಸುಳಿಸಲು ಯತ್ನಿಸುತ್ತಿತ್ತು ಎಂಬುದು ಗೊತ್ತೇ ಇದೆ. ಅದರ ಈ ಎಲ್ಲ ಕೃತ್ಯಗಳ ಹಿಂದೆ ಚೀನಾದ ನೆರವು ಇದ್ದೇಇದೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಸಂಘರ್ಷ, ಅಶಾಂತಿಯಲ್ಲಿದ್ದಷ್ಟು ಚೀನಾಕ್ಕೆ ಲಾಭ. ಅದು ಪಾಕ್ ಮೂಲಕ ಭಯೋತ್ಪಾದನೆ ರಫ್ತು ಮಾಡಲು, ಹಿಂಸೆ ಹರಡಲು ಯತ್ನಿಸುತ್ತದೆ. ಹಾಗಾಗಿ, ಆ ಎರಡೂ ರಾಷ್ಟ್ರಗಳ ಪ್ರತೀ ಮಾತನ್ನೂ, ನಡೆಯನ್ನೂ ತುಂಬ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಭಾರತ ಸಾಮರಿಕವಾಗಿ, ರಾಜತಾಂತ್ರಿಕವಾಗಿ ಬಲಿಷ್ಠವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ‘ಶಾಂತಿಸ್ಥಾಪನೆ’ ನೆಪದಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇರಿಕೊಂಡು ಭಾರತದ ವಿರುದ್ಧ ಮತ್ತೆ ಷಡ್ಯಂತ್ರ ರಚಿಸುವಂತಾಗಬಾರದು. ಹಾಗಾಗಿ, ಕದನವಿರಾಮ ಒಪ್ಪಂದದ ಹೊತ್ತಲ್ಲೂ ಭಾರತ ಎಚ್ಚರಿಕೆಯ ಹೆಜ್ಜೆಯನ್ನು ಇರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net