ಅಂದು 22,000, ಅದೇ ಇಂದು 2.2 ಲಕ್ಷ ರೂ.! ಉದ್ಯೋಗಿಯ ಪಯಣಕ್ಕೆ ನೆಟ್ಟಿಗರು ಫಿದಾ | Career Journey

ವಿಜಯವಾಣಿ (10)
Published on

Career Journey: ಉದ್ಯೋಗ ಅರಸಿ, ಹಳ್ಳಿ, ಗ್ರಾಮಾಂತರ ಭಾಗಗಳಿಂದ ನೂರಾರು ಕನಸು ಹೊತ್ತು ಸಿಲಿಕಾನ್ ಸಿಟಿ, ಮಹಾನಗರಿಗಳಿಗೆ ಹರಿದುಬರುವ ಅದೆಷ್ಟೋ ಯುವ ಮನಸ್ಸುಗಳಿಗೆ ಆಗುವ ನಿರಾಶೆ ಒಂದೆರೆಡಲ್ಲ. ಮೊದಲು ಕೆಲಸ ಸಿಕ್ಕರೆ ಸಾಕಪ್ಪ ಎಂದು ಪರದಾಡುವ ಯುವಜನತೆ, ಆ ಬಳಿಕ ಒಳ್ಳೆಯ ಸಂಬಳ ಫಿಕ್ಸ್ ಮಾಡಿದ್ರೆ ಸಾಕು ಎಂದು ಆಶಿಸುತ್ತಾರೆ. ಆದರೆ, ಬಹುತೇಕರಿಗೆ ಸಿಗುವ ಕೆಲಸ ಚೆನ್ನಾಗಿದ್ದರೂ ಅದಕ್ಕೆ ಕೊಡಲಾದ ಸಂಬಳ ಕಡಿಮೆಯೇ ಆಗಿರುತ್ತದೆ.

ಇದು ಭಾರೀ ನಿರಾಶೆಗೆ ಕಾರಣವಾಗುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕೇವಲ 15ರಿಂದ 20 ಸಾವಿರ ರೂ. ಸಂಬಳ ಕೊಟ್ಟರೆ ಜೀವನ ನಡೆಸುವುದಾದರೂ ಹೇಗೆ ಎಂಬುದು ಅನೇಕರ ಪ್ರಶ್ನೆ ಹಾಗೂ ಬೇಸರ. ಆದರೆ, ಉದ್ಯೋಗಿಗಳ ಈ ನೋವು ದೊಡ್ಡ ದೊಡ್ಡ ಸಂಸ್ಥೆಗಳ ಕಿವಿಗೆ ಬೀಳುವುದಿಲ್ಲ. ಬಿದ್ದರೂ ಪ್ರಯೋಜನವಿಲ್ಲ. ಕಾರಣ, ಆಯಾ ಕಂಪನಿಗಳಿಗೆ ಲಾಭ ಗಳಿಸುವುದಷ್ಟೇ ಧ್ಯೇಯವಾಗಿರುತ್ತದೆಯೇ ಹೊರತು ಉದ್ಯೋಗಿಗಳ ಯೋಗಕ್ಷೇಮ ಮತ್ತು ಬದುಕಿನ ಪರಿಸ್ಥಿತಿ ಬಗ್ಗೆ ಅಲ್ಲ. ಹೀಗಿರುವಾಗ, ಇಲ್ಲೊಬ್ಬರು ಆರಂಭದಲ್ಲಿ ತಿಂಗಳಿಗೆ 22,000 ರೂ. ಸಂಬಳಕ್ಕೆ ಕೆಲಸಕ್ಕೆ ಸೇರಿ, ಇಂದು 2.2 ಲಕ್ಷ ರೂ. ಸಂಬಳವನ್ನು ಯಾರ ಬೆಂಬಲ, ಪ್ರೋತ್ಸಾಹವಿಲ್ಲದೆ ಕೇವಲ ತಮ್ಮ ಶ್ರಮದಿಂದಲೇ ಗಿಟ್ಟಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಈ ವಿಷಯ ಸದ್ಯ ಜಾಲತಾಣಗಳಲ್ಲಿ ಹರಿದಾಡಿದ್ದು, ಹಲವರಲ್ಲಿ ಕುತೂಹಲ ಕೆರಳಿಸಿದೆ. ತನ್ನ 10 ವರ್ಷಗಳ ಕರಿಯರ್​ನ ಅನುಭವ ಹಂಚಿಕೊಂಡಿರುವ ಈ ವ್ಯಕ್ತಿ, ತಾನು ಹೇಗೆ ಈ ಹಂತಕ್ಕೆ ಬೆಳೆದೆ? 10 ವರ್ಷದಲ್ಲಿ ಜೀವನ ಹೇಗಿತ್ತು? ಯಾವ ವಿಭಾಗದಲ್ಲಿ ಕೆಲಸ ಮಾಡಿಕೊಂಡು ಇಂದು 2 ಲಕ್ಷ ರೂ. ಸಂಬಳವನ್ನು ಪಡೆಯುತ್ತಿದ್ದಾರೆ ಎಂಬುದರ ವಿವರವನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ.

"ನಾನು ನಾನ್​-ಟೆಕ್​ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ನಾನ್​-ಟೆಕ್​ ರೋಲ್​ನಲ್ಲಿ ಕೆಲಸ ಆರಂಭಿಸಿದೆ. ಮೊದಲ 6 ವರ್ಷಗಳ ಕಾಲ ನನ್ನ ಸಂಬಳ 22 ಸಾವಿರ ರೂ.ನಿಂದ 40 ಸಾವಿರ ರೂ. ಅಷ್ಟಕ್ಕೆ ಸೀಮಿತವಾಗಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಹಂತದಲ್ಲಿ ನನಗೆ ಸಾಕಷ್ಟು ಅರಿವಿರಲಿಲ್ಲ ಮತ್ತು ಸ್ಪಷ್ಟತೆ ಇರಲಿಲ್ಲ. ನನ್ನನ್ನು ನಾನು ಹೆಚ್ಚು ಮುಂದಕ್ಕೆ ಹೋಗುವಂತೆ ಇಚ್ಛಿಸುತ್ತಿರಲಿಲ್ಲ ಮತ್ತು ಎಲ್ಲೋ ಬೆಳೆಯುವ ಹಸಿವು ಕಣ್ಮರೆಯಾಗಿತ್ತು" ಎಂದು ಬರೆದಿದ್ದಾರೆ.

From ₹22K/month to ₹2.2L/month in 10 years — what changed for me byu/ResolutionDefiant571 inpersonalfinanceindia

40 ಸಾವಿರದಿಂದ ಇಂದು 2.2 ಲಕ್ಷ ರೂ.ಗೆ ಬಂದೆ. ಇದು ಲಕ್​ ಅಂತೂ ಅಲ್ಲವೇ ಅಲ್ಲ. ಸ್ಪಷ್ಟತೆ, ಶ್ರಮದ ಗರಿಷ್ಠತೆ ಮತ್ತು ಬದ್ಧತೆ. ಇದೇನೂ ದೊಡ್ಡ ಸಾಧನೆ ಅಲ್ಲ ಎಂಬ ಸಂಗತಿ ನನಗೂ ಗೊತ್ತಿದೆ. ಆದರೆ, ನನ್ನಂತೆಯೇ ಒತ್ತಡಕ್ಕೆ ಸಿಲುಕಿರುವ ಯಾರಿಗಾದರೂ ಸಹಾಯವಾಗಬಹುದು ಎಂಬ ನಿಟ್ಟಿನಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಒಮ್ಮೆ ನಿಮಗೆ ಸರಿಯಾದ ಮಾರ್ಗ ಸಿಕ್ಕರೆ ಎಲ್ಲವೂ ಸರಳ ಹಾಗೂ ಸುಲಭ ಎಂದಿದ್ದಾರೆ.

ಇದನ್ನು ಕಂಡ ಕೆಲವರು, ಇದೇನೂ ದೊಡ್ಡ ವಿಷಯವಲ್ಲ. ಹಲವರು ಈ ರೀತಿಯಲ್ಲಿ ಸಾಧಿಸಿದ್ದಾರೆ ಮತ್ತು ಬೆಳವಣಿಗೆ ಕಂಡಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ. ಇನ್ನೂ ಕೆಲವರು, ನಿಮ್ಮಂತೆ ನಾವು ಸಹ ಬೆಳೆಯಬೇಕು. ಒಂದಷ್ಟು ಸಲಹೆಗಳನ್ನು ಕೊಡಿ ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net