

ಒಬ್ಬ ಯುವ ಸಾಫ್ಟ್ವೇರ್ ಇಂಜಿನಿಯರ್ ವೃದ್ಧಾಶ್ರಮದಲ್ಲಿರುವ ತನ್ನ ಪಾಲಕರನ್ನು ಭೇಟಿಯಾಗಲು ಅಮೆರಿಕದಿಂದ ಬಂದಿದ್ದ. ಅವರ ಮಾನಸಿಕ ಅನಾರೋಗ್ಯದ ಕಾರಣದಿಂದಾಗಿ ನನ್ನನ್ನು ಭೇಟಿಯಾಗಲು ಬಂದಾಗ ಅವನ ಮನಸ್ಸಿನಲ್ಲಿ ಏನೊ ಒಂದು ತರಹದ ಗೊಂದಲವಿದೆ ಎಂದು ಅನಿಸಿತು. ಏನು ಸಮಸ್ಯೆ ಎಂದು ವಿಚಾರಿಸಿದಾಗ, ‘ಡಾಕ್ಟರೇ! ನನ್ನ ಪಾಲಕರನ್ನು ಸಮೀಪದ ವೃದ್ಧಾಶ್ರಮದಲ್ಲಿಟ್ಟಿದ್ದು ಅವರು ಮಾನಸಿಕ ನೆಮ್ಮದಿ ಕಳೆದುಕೊಂಡಂತಿದೆ. ಅದಕ್ಕೆ ನೀವು ಏನಾದರೂ ಪರಿಹಾರ ಸೂಚಿಸಿ’ ಎಂದ. ‘ಆಯಿತು, ಅವರನ್ನು ಭೇಟಿಯಾಗೋಣ, ನಡೆಯಿರಿ’ ಎಂದೆ.
ಅದರಂತೆ ಆತನ ಕಾರಿನಲ್ಲಿ ವೃದ್ಧಾಶ್ರಮಕ್ಕೆ ಹೊರಡಲು ಹೊರಬಂದೆ. ಆತನ ಕಾರಿನ ಮೇಲೆ ‘ತಂದೆ ತಾಯಿ ಆಶೀರ್ವಾದ’ ಎಂದು ಬರೆದಿತ್ತು. ಅದನ್ನು ಓದಿದ್ದೇ ತಡ, ಕೂಡಲೇ ನಾನು ಕಾರಿನಿಂದ ಕೆಳಗಿಳಿದು, ‘ನಾನು ನಿನ್ನ ಕಾರಿನಲ್ಲಿ ವೃದ್ಧಾಶ್ರಮಕ್ಕೆ ಬರುವುದಿಲ್ಲ. ನನ್ನ ಕಾರಿನಲ್ಲೇ ಬರುವೆ’ ಎಂದೆ. ‘ನಿನ್ನ ಕಾರಿನ ಮೇಲೆ ತಂದೆ ತಾಯಿ ಆಶೀರ್ವಾದ ಅಂತ ಬರೆಯಿಸಿಕೊಂಡು ಅವರನ್ನು ವೃದ್ಧಾಶ್ರಮದಲ್ಲಿ ಇಟ್ಟಿರುವುದು ಎಷ್ಟು ಸರಿ?’ ಎಂದೆ. ಅದಕ್ಕೆ ಅವನು ಕೆಲ ಕಾಲ ಸುಮ್ಮನಾದರೂ ನಂತರ, ‘ಹೌದು ಡಾಕ್ಟರೇ! ಅವರು ನನಗೆ ಓದಿಸಿದರು, ಒಳ್ಳೆಯ ಉದ್ಯೋಗ ಸಿಕ್ಕಿತು. ಇದು ಅವರ ಆಶೀರ್ವಾದ ಅಲ್ಲವೇ?’ ಎಂದ. ‘ಹಾಗಿದ್ದರೆ ಅವರ ಕುಶಲೋಪರಿ ನಿನ್ನ ಕರ್ತವ್ಯ ಹಾಗೂ ನೈತಿಕ ಹೊಣೆಯಲ್ಲವೇ?’ ಎಂದಾದಾಗ ನಿರುತ್ತರನಾದ. ಅದಾದ ಮೇಲೆ ಅವನ ಪಾಲಕರಿಗೆ ಪರಿಹಾರ ಸೂಚಿಸಿದೆ. ಅದೆಲ್ಲ ಆಯಿತು. ಕೊನೆಗೆ ಆತ ಪರ್ಸ್ನಲ್ಲಿದ್ದ ಹಲವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ತೆಗೆದು, ‘ನಿಮಗೆ ಪೇಮೆಂಟ್ ಹೇಗೆ ಡಾಕ್ಟ್ರೇ?’ ಎಂದು ಕೇಳಿದ. ಆಗ, ‘ನಿನ್ನ ದುಡ್ಡು ನನಗೆ ಬೇಡ. ನಾನು ಅವರ ಚಿಕಿತ್ಸೆ ಸೇವೆ ಎಂದುಕೊಳ್ಳುತ್ತೇನೆ. ಆದರೆ ಒಂದು ಮಾತು ನೆನಪಿಟ್ಟುಕೊ. ಈ ಇಳಿವಯಸ್ಸಿನಲ್ಲಿ ಅವರಿಗೆ ನಿನ್ನ ಆಸರೆ ಮತ್ತು ಕೌಟುಂಬಿಕ ವಾತಾವರಣದ ಅಗತ್ಯವಿದೆ. ನೀನು ವೃದ್ಧಾಶ್ರಮದ ಬದಲು ಊರಲ್ಲೇ ಒಂದು ಒಳ್ಳೆಯ ಮನೆ ಬಾಡಿಗೆ ಪಡೆದು ಯೋಗ್ಯ ಹಿತೈಷಿಗಳನ್ನು ಅವರ ಜತೆಗಿಡಬಹುದಲ್ಲವೇ?’ ಎಂದು ಹೇಳಿ ಕಳಿಸಿದೆ. ಆತ ಮರುದಿನ ಬಂದವನೇ, ‘ಸರ್, ನೀವು ನನ್ನ ಕಣ್ಣು ತೆರೆಯಿಸಿದಿರಿ. ನಾನೀಗ ಒಂದು ಮನೆ ಮಾಡಿ ಅವರ ಜತೆ ನನ್ನ ಸಂಬಂಧಿಕರ ಮಕ್ಕಳನ್ನು ಓದಲು ಇಟ್ಟಿದ್ದೇನೆ. ಆರು ತಿಂಗಳಿಗೊಮ್ಮೆ ಬಂದು ಒಂದು ತಿಂಗಳು ಇರುತ್ತೇನೆ’ ಎಂದು ಕೈಮುಗಿದು ಹೋದ.
ಒಟ್ಟಾರೆ ಇದರ ತಾತ್ಪರ್ಯ ಏನೆಂದರೆ - ಬಾಲ್ಯದಿಂದ ನಮ್ಮನ್ನು ಸಾಕಿ ಸಲುಹಿದ, ಸಮಾಜದಲ್ಲಿ ಒಂದು ಐಡೆಂಟಿಟಿ ಸಿಗುವ ಹಾಗೆ ಬೆಳೆಸಿದ ಪಾಲಕರು ಇಂದು ಇಷ್ಟರ ಮಟ್ಟಿಗೆ ಅನಾದರಕ್ಕೆ ಒಳಗಾಗಿರುವುದು ವಿಪರ್ಯಾಸ. ಇದಕ್ಕೆ ಒಂದು ಕಾರಣ - ವಿದೇಶ ವ್ಯಾಮೋಹದ ಪರಮಾವಧಿ. ಇನ್ನು ಪಾಲಕರಿಗೂ ಅಷ್ಟೇ, ತಮ್ಮ ಮಕ್ಕಳು ಫಾರಿನ್ಗೆ ಹೋಗಬೇಕು. ಮೊಮ್ಮಗ ಅಥವಾ ಮೊಮ್ಮಗಳು ಅಲ್ಲೇ ಜನಿಸಬೇಕು ಹಾಗೂ ಅಲ್ಲಿಯ ಪೌರತ್ವವನ್ನು ಪಡೆಯಬೇಕು ಎಂಬುದು ಯಾಕೆ? ನಮ್ಮಲ್ಲಿಯೇ ಹುಟ್ಟಿ ಬೆಳೆದು ಕಲಿತು ಪರದೇಶದ ವ್ಯಾಮೋಹ ಏತಕೆ? ಭಾರತಾಂಬೆಯ ಮಡಿಲಲ್ಲಿ ಜನಿಸಿದವರು ಹಾಗೂ ಜನಿಸುವವರು ಭಾಗ್ಯಶಾಲಿಗಳು. ನಮ್ಮ ದೇಶದ ಪರಂಪರೆ, ಸಂಸ್ಕೃತಿ, ಋಷಿಮುನಿಗಳ ತಪಸ್ಸಿನ ಪುಣ್ಯ ಎಲ್ಲಕ್ಕಿಂತ ಮಿಗಿಲಾಗಿದ್ದು. ಈ ಸಂದೇಶ ನಮ್ಮ ಸಮಾಜಕ್ಕೆ ಮುಟ್ಟಬೇಕು. ಹೀಗೆ ಒಂದು ಮಹತ್ವಾಕಾಂಕ್ಷೆಯ ಭ್ರಮಾಲೋಕದಲ್ಲಿ ಇರುವುದನ್ನು ನಾವು ಕಾಣಬಹುದು.
ಕರೊನಾ ಇದಕ್ಕೆಲ್ಲ ತಕ್ಕ ಉತ್ತರ ನೀಡಿದೆ. ಕರೊನೋತ್ತರ ಕಾಲದಲ್ಲಿ ಜನ ವಿದೇಶವಿರಲಿ ಮೆಟ್ರೋ ಸಿಟಿಗಳ ಸಹವಾಸವೇ ಬೇಡ ಎನ್ನುವ ಮನಃಸ್ಥಿತಿಗೆ ಬಂದಿದ್ದಾರೆ. ಕೂಡುಕುಟುಂಬ ಹಾಗೂ ಮನೆಮಂದಿಯೆಲ್ಲ ಒಟ್ಟಿಗೆ ಬಾಳುವುದರಲ್ಲಿ ಇರುವ ನೆಮ್ಮದಿ ಮತ್ತೊಂದಿಲ್ಲ ಎನ್ನುವ ನಗ್ನ ಸತ್ಯದ ಅರಿವು ಈಗ ಆಗತೊಡಗಿದೆ. ಇನ್ನು ಅಂತಾರಾಷ್ಟ್ರೀಯ ಖ್ಯಾತಿಯ ಮಧುರೈನ ಹಿರಿಯ ಮನೋವೈದ್ಯ ಡಾ. ಎ. ವೆಂಕೋಬರಾವ್ ಅವರು ತಮ್ಮ
‘ವರ್ಲ್ಡ್ ಆಫ್ ಎಲ್ಡರ್ಲಿ’ ಪುಸ್ತಕದಲ್ಲಿ, ‘ದ ಫ್ಯೂಚರ್ ಆಫ್ ಎವರಿ ಯುತ್ ಇಸ್ ಓಲ್ಡೇಜ್’ ಎಂದು ಬಲು ಮಾರ್ವಿುಕವಾಗಿ ಬರೆದಿದ್ದಾರೆ. ಇಂದಿನ ಯುವಕರು ನಾಳೆಯ ವೃದ್ಧರು ಎಂಬ ವಾಸ್ತವತೆಯನ್ನು ಅರಿತುಕೊಂಡರೆ ಒಳಿತಲ್ಲವೇ?