

ಮುಂಬೈ: ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಯಶಸ್ಸು ಸಾಧಿಸುತ್ತಿರುವ ಮುಂಬೈ ಇತರ ರಾಜ್ಯಗಳಿಗೆ ಮಾದರಿ ಎನಿಸುತ್ತಿದೆ. ಇದೇ ವೇಗದಲ್ಲಿ ಚೇತರಿಕೆ ಪ್ರಮಾಣ ಹಾಗೂ ಹೊಸ ಪ್ರಕರಣಗಳಿಗೆ ಕಡಿವಾಣ ಬಿದ್ದಿದ್ದೇ ಆದಲ್ಲಿ ಆಗಸ್ಟ್ ಅಂತ್ಯಕ್ಕೆ ಕರೊನಾ ನಿಗ್ರಹದಲ್ಲಿ ಯಶಸ್ಸು ಸಾಧಿಸಲಿದೆ.
ಈವರೆಗೆ ಒಟ್ಟಾರೆ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ 4.22 ಲಕ್ಷ ಆಗಿದೆ. ಆರಂಭದಲ್ಲಿ ಮುಂಬೈನಲ್ಲಿ ರಾಜ್ಯದ ಶೇ.50ಕ್ಕೂ ಹೆಚ್ಚು ಕೋವಿಡ್ ರೋಗಿಗಳಿದ್ದರು. ಆದರೆ, ಸದ್ಯ ಇಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 20,561 ಆಗಿದೆ.
ವಾಣಿಜ್ಯ ರಾಜಧಾನಿಯಲ್ಲಿ ಕೋವಿಡ್ ರೋಗಿಗಳ ಚೇತರಿಕೆ ಪ್ರಮಾಣ ಶೇ.76. ಆಗಿದೆ. ಒಟ್ಟಾರೆ 87,074 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 689 ಜನರು ಗುಣವಾಗಿದ್ದಾರೆ. ಇನ್ನು, ಭಾರಿ ಆತಂಕ ಮೂಡಿಸಿದ್ದ ಧಾರಾವಿ ಕೊಳೆಗೇರಿಯಲ್ಲಿ ಜುಲೈ 1ರಂದು 535 ಸಕ್ರಿಯ ಪ್ರಕರಣಗಳಿದ್ದವು. ಜುಲೈ 31ರಂದು ಈ ಸಂಖ್ಯೆ 77ಕ್ಕೆ ಇಳಿದಿದೆ.
ಕಳೆದ ಒಂದು ವಾರದಲ್ಲಿ ಹೊಸ ಸೋಂಕಿತರ ಏರಿಕೆ ಪ್ರಮಾಣ ಶೇ.0.92ಕ್ಕೆ ಕುಸಿದಿದೆ. ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಅವಧಿ 76 ದಿನಕ್ಕೆ ಏರಿಕೆಯಾಗಿದೆ. ಇದೇ ಅಂಕಿ-ಸಂಖ್ಯೆಗಳನ್ನು ಕಾಯ್ದುಕೊಂಡಿದ್ದೇ ಆದಲ್ಲಿ ಆಗಸ್ಟ್ ಅಂತ್ಯಕ್ಕೆ ಕರೊನಾ ಮೇಲೆ ಮುಂಬೈ ಹಿಡಿತ ಸಾಧಿಸಲಿದೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ; ಮುಂಬೈ ಕೊಳೆಗೇರಿಯವರ ಬಳಿ ನಡೆಯಲಿಲ್ಲ ಕರೊನಾ ಆಟ
ಈ ಅಂಕಿ-ಸಂಖ್ಯೆಗಳನ್ನು ಬೆಂಗಳೂರಿಗೆ ಹೋಲಿಸಿ ನೋಡುವುದಾದರೆ ಆಗಸ್ಟ್1ರಂದು ರಾಜಧಾನಿಯಲ್ಲಿ 37,760 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 18,579. ಒಟ್ಟು ಸೋಂಕಿತರು 57,396.
ಆರಂಭದಲ್ಲಿ ಕರೊನಾದಿಂದಾಗಿ ದೇಶದಲ್ಲಿಯೇ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದ ಮುಂಬೈನಲ್ಲಿ ಸೋಂಕು ತೀವ್ರವಾಗಿ ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಲಸಿಕೆ ಬರುವವರೆಗೆ ಎಚ್ಚರಿಕೆಯಿಂದಲೇ ಇರಬೇಕು ಎನ್ನುತ್ತಾರೆ ಮುಂಬೈ ಪಾಲಿಕೆ ಅಧಿಕಾರಿಗಳು.