

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ದತ್ತಾಂಶ ಆಧಾರಿತ ಸರ್ಕಾರಿ ವ್ಯವಸ್ಥೆ ಮತ್ತು ಸೇವೆಗಳನ್ನು ಜಾರಿಗೆ ತರುವ ಪ್ರಯತ್ನದಲ್ಲಿ ಕರ್ನಾಟಕ ಹೊಸ ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದೆ. ಇದರ ಮುಂದುವರಿದ ಭಾಗವಾಗಿ ಆಸ್ತಿ ಮಾಲೀಕರ ಕಾರ್ಡ್ ಯೋಜನೆ ‘ಡಿಜಿಟಲ್ ವ್ಯಾಲೆಟ್’ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ.
ಕಂದಾಯ ಇಲಾಖೆಯ ಡೇಟಾ ಬಳಸಿಕೊಂಡು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇಗೌರ್ನೆನ್ಸ್ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಮಹತ್ವದ ಬದಲಾವಣೆಯೊಂದಕ್ಕೆ ನಾಂದಿ ಹಾಡಲಿದೆ. ಎಟಿಎಂ ಅಥವಾ ಡಿಎಲ್ ಮಾದರಿಯ ಕಾರ್ಡ್ ಜನರ ಕೈಗೆ ಬರಲಿದ್ದು, ಅದರಲ್ಲಿ ಅವರ ಆಸ್ತಿಯ ಡಿಜಿಟಲ್ ಮಾಹಿತಿ ಅಡಕವಾಗಿರಲಿದೆ. ದಾಖಲೆ ತೆಗೆಸುವುದು ಅಥವಾ ಪರಿಶೀಲನೆ ಪ್ರಕ್ರಿಯೆ ಈ ಕಾರ್ಡ್ನಿಂದ ಸುಲಲಿತವಾಗಲಿದ್ದು, ಒಟಿಪಿ ಆಧರಿತವಾಗಿ ಸರ್ಕಾರವೇ ಸ್ಥಾಪಿಸುವ ಕಿಯಾಸ್ಕ್ನಲ್ಲಿ ವೀಕ್ಷಿಸಬಹುದು.
ಇದಲ್ಲದೆ, ಈ ಕಾರ್ಡ್ ಆಧಾರದಲ್ಲಿಯೇ ಉಪ ನೋಂದಣಾಧಿಕಾರಿಗಳು ನೋಂದಣಿ ಪ್ರಕ್ರಿಯೆ ಮಾಡಲಿದ್ದಾರೆ. ಉಪ ನೋಂದಣಾಧಿಕಾರಿ ಕಚೇರಿ ಹೊರತಾಗಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಈ ಮಾಹಿತಿ ಕಿಯಾಸ್ಕ್ಗಳು ಸ್ಥಾಪನೆಯಾಗಲಿವೆ. ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸದೆ ಕಾರ್ಡ್ ಬಳಸಿಕೊಂಡು ಮಾಹಿತಿ ವೀಕ್ಷಿಸಬಹುದು. ಹೀಗಾಗಿ ಜನಸಾಮಾನ್ಯರು ಮಾಹಿತಿ ತೆಗೆಸುವ ದೊಡ್ಡ ಸಾಹಸ ಪ್ರಕ್ರಿಯೆ, ಲಂಚ ನೀಡುವುದು, ಸರ್ಕಾರಿ ಅಧಿಕಾರಿಗಳ ಮುಂದೆ ಗೋಗರೆತದಂತಹ ಪ್ರಸಂಗಗಳಿಗೆ ಮುಂದಿನ ದಿನಗಳಲ್ಲಿ ತೆರೆಬೀಳಬಹುದು. ಬಹು ಮುಖ್ಯವಾಗಿ ದಾಖಲೆ ವಿಷಯವಾಗಿ ಸರ್ಕಾರಿ ಅಧಿಕಾರಿ, ನೌಕರರನ್ನು ಸಂರ್ಪಸದೆ ನೇರವಾಗಿ ಪರಿಶೀಲಿಸುವ ಅವಕಾಶ ಸಾಮಾನ್ಯರಿಗೆ ಒದಗಿಬರಲಿದೆ. ಎಟಿಎಂ ಅಥವಾ ಡಿಎಲ್ ಮಾದರಿಯ ಈ ಕಾರ್ಡ್ನ ಚಿಪ್ನಲ್ಲಿ ದಾಖಲೆ ಅಡಕವಾಗಿರುತ್ತದೆ. ಕಾಲಾನುಕ್ರಮದಲ್ಲಿ ಆಸ್ತಿ ಮಾರಾಟ ಅಥವಾ ಖರೀದಿಯಾದ ಬಳಿಕ ಕಿಯಾಸ್ಕ್ನಲ್ಲಿ ಅಪ್ಡೇಟ್ ಆಗುವುದು. ಪ್ರಾಯೋಗಿಕ ತಯಾರಿಗಳೆಲ್ಲ ಮುಗಿದಿದ್ದು, ಸರ್ಕಾರದಿಂದ ಅಂತಿಮ ಒಪ್ಪಿಗೆ ಸಿಗಬೇಕು ಮತ್ತು ಅನುಷ್ಠಾನದ ಕುರಿತು ತೀರ್ವನಗಳಾಗಬೇಕಾಗಿದೆ.
ಕಾರ್ಯ ಹೇಗೆ?: ಆಸ್ತಿಯನ್ನು ನೋಂದಾಯಿಸಲು ಉದ್ದೇಶಿಸಿರುವ ಅಥವಾ ಈಗಾಗಲೇ ಆಸ್ತಿ ಹೊಂದಿರುವ ಯಾವುದೇ ವ್ಯಕ್ತಿಗೆ ಸರ್ಕಾರವೇ ಸ್ಮಾರ್ಟ್ಕಾರ್ಡ್ಗಳನ್ನು ನೀಡುತ್ತದೆ. ಇದನ್ನು ಇ-ಕೆವೈಸಿ ಮೂಲಕ ಸ್ಥಳೀಯ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ದೃಢೀಕರಿಸಲಾಗುತ್ತದೆ, ವ್ಯಕ್ತಿಯ ಆಧಾರ್ ಸಂಖ್ಯೆ, ಬಯೋಮೆಟ್ರಿಕ್ನೊಂದಿಗೆ ದಾಖಲೀಕರಣ ನಡೆಯುತ್ತದೆ. ಸರ್ಕಾರದ ಕಾವೇರಿ ಮತ್ತು ಭೂಮಿ ಪೋರ್ಟಲ್ನಲ್ಲಿ ಇರುವ ದಾಖಲೆಗಳೊಂದಿಗೆ ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದರೆ, ನಾಲ್ಕು ಅಂಕಿಗಳ ಪಾಸ್ವರ್ಡ್ ಬಳಸಿಕೊಂಡು ಮಾಲೀಕರು ಯಾವುದೇ ಸಮಯದಲ್ಲಿ ದಾಖಲೆ ವೀಕ್ಷಿಸಬಹುದು. ಒಬ್ಬ ವ್ಯಕ್ತಿಯು ಹಲವಾರು ಆಸ್ತಿಗಳನ್ನು ಹೊಂದಿದ್ದರೆ, ಅವೆಲ್ಲವನ್ನೂ ಒಂದೇ ಸ್ಮಾರ್ಟ್ ಕಾರ್ಡ್ನಲ್ಲಿ ನೋಂದಾಯಿಸಲಾಗುತ್ತದೆ. ಹೀಗಾಗಿ ದಾಖಲೆ ಸಂಗ್ರಹ, ಒಯ್ಯುವ ಹೊರೆ ಇರುವುದಿಲ್ಲ.
ಯಾವುದಕ್ಕೆ ಅನ್ವಯ?: ಕೃಷಿ, ನಿವೇಶನ, ವಾಣಿಜ್ಯ ಕಟ್ಟಡ, ವಸತಿ, ಸರ್ಕಾರಿ ಆಸ್ತಿ, ಮಾರಾಟ, ಖರೀದಿ, ಗುತ್ತಿಗೆ, ಅಡಮಾನ, ಉಡುಗೊರೆ ಪತ್ರ ಸೇರಿ 67 ವಿವಿಧ ರೀತಿಯ ಭೂ ವಹಿವಾಟು ದಾಖಲೆ.
ಪ್ರಯೋಗ ಯಶ: ಕಳೆದ ಒಂದು ತಿಂಗಳಿನಿಂದ 781 ಸ್ಮಾರ್ಟ್ ಕಾರ್ಡ್ಗಳನ್ನು ನೀಡಿದ್ದು, ಅದರ ಮೂಲಕ 11 ವಿವಿಧ ರೀತಿಯ 310 ವಹಿವಾಟು ನಡೆಸಿ ಪ್ರಾಯೋಗಿಕವಾಗಿ ಯಶಸ್ಸು ಸಾಧಿಸಲಾಗಿದೆ.