

ಹೈದರಾಬಾದ್: ಕೆಲವರು ಬೈಕ್ ಅಥವಾ ಕಾರ್ ಚಾಲನೆ ಮಾಡುತ್ತಿದ್ದರೆ, ದೆವ್ವ ಮೈಮೇಲೆ ಬಂದಂತೆ ವರ್ತಿಸುತ್ತಾರೆ. ಎದುರಿಗೆ ಏನಿದೆ ಎಂಬುದನ್ನೂ ನೋಡದೆ ಅಮಾಯಕರ ಜೀವಹಾನಿಗೆ ಕಾರಣರಾಗುತ್ತಾರೆ. ಇಂತಹುದೇ ಘಟನೆ ಭಾನುವಾರ ವನಸ್ಥಲಿಪುರಂನಲ್ಲಿ ನಡೆದಿದೆ. ಯುವಕನೊಬ್ಬನ ರ್ಯಾಶ್ ಡ್ರೈವಿಂಗ್ ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿ 10 ಮೀಟರ್ ದೂರ ಗಾಳಿಯಲ್ಲಿ ಹಾರಿ ಬಿದ್ದಿದ್ದು, ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಯುವತಿ ರಸ್ತೆ ಬದಿ ನಡೆದು ಹೋಗುತ್ತಿರುತ್ತಾಳೆ. ಅಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯುತ್ತದೆ. ಇದರಿಂದಾಗಿ ಯುವತಿ ಸುಮಾರು 10 ಮೀಟರ್ ದೂರ ಮೇಲಕ್ಕೆ ಹಾರಿ ಗಾಳಿಯಲ್ಲಿ ಚೆಂಡಿನಂತೆ ತೇಲುತ್ತ ರಸ್ತೆ ಮೇಲೆ ಬಿದ್ದಿದ್ದಾಳೆ. ಕೂಡಲೇ ಸ್ಥಳೀಯರು ಯುವತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಸ್ರತುತ ಯುವತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಕಾರು ಅಪಘಾತಕ್ಕೆ ಕಾರಣನಾದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರು ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಲಿಗಳು ಚಾಲನೆ ಮಾಡುವ ವಾಹನಗಳನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಇನ್ನು ಕೆಲವರು, ವಾಹನಗಳನ್ನು ಯದ್ವಾತದ್ವ ಓಡಿಸಿ ಇತರರ ಪ್ರಾಣ ಹಾನಿಗೆ ಕಾರಣರಾಗುವವರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.