

ಉಡುಪಿ: ಅಯ್ಯೋ, ವಿಧಿಯೇ ನೀ ಎಂಥಾ ಕ್ರೂರಿ? ಎಂದು ಶಪಿಸಬೇಕು ಅನ್ನಿಸುತ್ತೆ ಈ ಘಟನೆಯನ್ನ ನೋಡಿದ್ರೆ. ಮೂವರು ಪುಟ್ಟ ಕಂದಮ್ಮಗಳೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆ ಆ ಮಕ್ಕಳ ಕಣ್ಣೆದುರಲ್ಲೇ ಪ್ರಾಣಬಿಟ್ಟಿದ್ದಾಳೆ!
ಇಂತಹ ಹೃದಯ ವಿದ್ರಾವಕ ಘಟನೆ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ. ಸುಹಾನಾ(30) ಮೃತಪಟ್ಟವರು. ಸುಹಾನ ಮತ್ತು ಸಿಬ್ಗತುಲಾ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಕಾರಿನಲ್ಲಿ ಭಟ್ಕಳದಿಂದ ವಾಪಸ್ ಆಗುತ್ತಿದ್ದರು. ಕಾರನ್ನು ಸಿಬ್ಗತುಲಾ ಚಲಾಯಿಸುತ್ತಿದ್ದರು.
ಹೆಮ್ಮಾಡಿಗೆ ಕಾರು ಬರುತ್ತಿದ್ದಂತೆ ಮುಂದಿನ ಚಕ್ರ ಸ್ಫೋಟಗೊಂಡು ಕಾರು ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಸುಹಾನ ಮೃತಪಟ್ಟಿದ್ದಾರೆ. ತಮ್ಮ ಕಣ್ಣೆದುರಲ್ಲೇ ಅಮ್ಮ ಕೊನೆಯುಸಿರೆಳೆದರೂ ಏನೂ ಅರಿಯದ ಪುಟ್ಟ ಕಂದಮ್ಮಗಳು ಅಮ್ಮನತ್ತ ಕೈಬೀಸಿ ಎತ್ತಿಕೊಳ್ಳುವಂತೆ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಪತಿ ಹಾಗೂ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.