ಇದ್ದಕ್ಕಿದ್ದಂತೆ ಕುಸಿದ ಹೆದ್ದಾರಿ; ವಾಹನಗಳು ದೊಡ್ಡ ಗುಂಡಿಯೊಳಗೆ!

Car Road
Published on

ಮುಂಬೈ/ದೆಹಲಿ: ಇದ್ದಕ್ಕಿದ್ದಂತೆ ಹೆದ್ದಾರಿ ಕುಸಿದ ಪರಿಣಾಮವಾಗಿ ವಾಹನಗಳು ದೊಡ್ಡ ಗುಂಡಿಯೊಳಕ್ಕೆ ಸೇರಿದ ಅತ್ಯಪರೂಪದ ಪ್ರಕರಣವೊಂದು ನಡೆದಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಕುಸಿದ ರಸ್ತೆಯೊಳಗೆ ವಾಹನಗಳು ಸಿಲುಕಿ ಆತಂಕದ ವಾತಾವರಣ ಉಂಟಾಗಿತ್ತು.

ಮುಂಬೈನ ಚುನಂಭಟ್ಟಿ ಪ್ರದೇಶದ ರಾಹುಲ್​ನಗರದ ಈಸ್ಟರ್ನ್​ ಎಕ್ಸ್​ಪ್ರೆಸ್​​ ಹೈವೇಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಖಾಸಗಿ ನಿರ್ಮಾಣ ಸಂಸ್ಥೆಯೊಂದು ಕಟ್ಟಡ ನಿರ್ಮಾಣಕ್ಕಾಗಿ ಪಕ್ಕದಲ್ಲೇ ಬೃಹತ್ ಪ್ರಮಾಣದಲ್ಲಿ ಅಗೆತ ನಡೆಸಿದ್ದು, ಅದಕ್ಕೆ ತಾಗಿದಂತೆ ಈ ಹೆದ್ದಾರಿ ಸುಮಾರು 25 ಅಡಿಗಳಷ್ಟು ಆಳಕ್ಕೆ ಕುಸಿದಿದೆ.

ಹೀಗೆ ಕುಸಿದ ರಸ್ತೆಯಿಂದ ಉಂಟಾದ ದೊಡ್ಡ ಗುಂಡಿಯೊಳಕ್ಕೆ ಕಾರುಗಳು ಹಾಗೂ ದ್ವಿಚಕ್ರವಾಹನಗಳು ಬಿದ್ದಿವೆ. ಅದರಲ್ಲೂ ಕಾರೊಂದು ಕುಸಿದ ಹೆದ್ದಾರಿಯ ಅಂಚಿಂದ ಗುಂಡಿಯೊಳಕ್ಕೆ ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ತುಣುಕು ವೈರಲ್ ಆಗಿದೆ. ಬಿದ್ದ ವಾಹನಗಳಲ್ಲಿ ಬಹುತೇಕವು ಪಾರ್ಕ್ ಮಾಡಿದ್ದ ವಾಹನಗಳಾದ್ದರಿಂದ ಅಂಥ ಯಾವುದೇ ಸಾವು-ನೋವು ವರದಿಯಾಗಿಲ್ಲ.

ದೆಹಲಿಯಲ್ಲೂ ರಸ್ತೆ ಕುಸಿತ: ಭಾರಿ ಮಳೆಯ ಕಾರಣ ದೆಹಲಿಯ ಜನಕಪುರಿ ಪ್ರದೇಶದಲ್ಲಿ ರಸ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಆದರೆ ಈ ಸಂದರ್ಭದಲ್ಲಿ ವಾಹನದ ಓಡಾಟ ಇರದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಉತ್ತರಪ್ರದೇಶದ ಲಕ್ನೋದ ಬಲರಾಂಪುರ ಆಸ್ಪತ್ರೆ ಬಳಿಯ ನಿನ್ನೆ ರಸ್ತೆ ಕುಸಿದು ಕಾರೊಂದು ಸಿಲುಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net