Bengaluru Accident: ಆರಾಮವಾಗಿ ಬಿಸಿ-ಬಿಸಿ ಕಬಾಬ್ ಸವಿಯುತ್ತಾ ನಿಂತಿದ್ದ ಗ್ರಾಹಕರಿಗೆ ಕ್ಷಣಾರ್ಧದಲ್ಲಿ ಆಘಾತ ಎದುರಾದ ಭೀಕರ ಘಟನೆಯೊಂದು ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಸಮೀಪ ನಡೆದಿದೆ. ಅತಿ ವೇಗವಾಗಿ ಬಂದ ಎಸ್‌ಯುವಿ ಕಾರೊಂದು ನಿಯಂತ್ರಣ ತಪ್ಪಿ ನೇರವಾಗಿ ಕಬಾಬ್ ಅಂಗಡಿಯೊಳಗೆ ನುಗ್ಗಿದ್ದು, ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬನ್ನೇರುಘಟ್ಟದ ಹೊಮ್ಮದೇವನಹಳ್ಳಿಯಲ್ಲಿರುವ 'ಹಾಲೇವೂರಮ್ಮ ಕಬಾಬ್ ಸೆಂಟರ್' ಬಳಿ ಈ ದುರಂತ ನಡೆದಿದೆ. ಅತಿ ವೇಗವಾಗಿ ಬಂದ ಮಿತ್ಸುಬಿಷಿ ಪಜೆರೊ ಸ್ಪೋರ್ಟ್ಸ್ (Mitsubishi Pajero Sport) ಕಾರು ಚಾಲಕಿಯ ನಿಯಂತ್ರಣ ತಪ್ಪಿ, ಮೊದಲಿಗೆ ವೈನ್ ಶಾಪ್ ಪಕ್ಕದಲ್ಲಿದ್ದ ಸಾಲು ಬೈಕ್‌ಗಳಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ಸಿಗದೆ ನೇರವಾಗಿ ಕಬಾಬ್ ಅಂಗಡಿಯೊಳಗೆ ನುಗ್ಗಿದೆ.
ಕಾರು ಅಂಗಡಿಗೆ ಡಿಕ್ಕಿ ಹೊಡೆದ ರಭಸಕ್ಕೆ ಅಲ್ಲೇ ಇಡಲಾಗಿದ್ದ ಕುದಿಯುವ ಎಣ್ಣೆಯ ಬಾಂಡ್ಲಿ ಉಲ್ಟಾ ಆಗಿದೆ. ಪರಿಣಾಮ ಅಂಗಡಿಯಲ್ಲಿದ್ದ ಬಸವರಾಜ್, ಮುನಿಕೃಷ್ಣ ಹಾಗೂ ಮಂಜೇಶ್ ಎಂಬುವರ ಮೇಲೆ ಬಿಸಿ ಎಣ್ಣೆ ಬಿದ್ದು ಗಂಭೀರ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಗಾಯಾಳುಗಳನ್ನು ಸಮೀಪದ ಮೇಡೆಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಸಮಯದಲ್ಲಿ ಕಾರನ್ನು ಸಜೀನಾ ಬೇಗಂ ಎಂಬ ಮಹಿಳೆ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟ ಠಾಣೆ ಪೊಲೀಸರು, ಅಪಘಾತಕ್ಕೆ ಕಾರಣವಾದ ಎಸ್‌ಯುವಿ ವಾಹನವನ್ನು ಜಪ್ತಿ ಮಾಡಿದ್ದಾರೆ. ಚಾಲಕಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಚಾಲಕರ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.