Overcoming Embarrassment: ಎಲ್ಲರ ಮುಂದೆ ಸಣ್ಣ ತಪ್ಪಾದಾಗ ಮುಜುಗರಗೊಂಡು ಜನರು ನಮ್ಮನ್ನು ಹೇಗೆ ನೋಡುತ್ತಿದ್ದಾರೆ ಎಂದು ಯೋಚಿಸುವುದು ಮನುಷ್ಯನ ಸಹಜ ಸ್ವಭಾವ. ಮನೋವಿಜ್ಞಾನದ ಭಾಷೆಯಲ್ಲಿ ಇದಕ್ಕೆ 'ಸ್ಪಾಟ್‌ಲೈಟ್ ಎಫೆಕ್ಟ್' ಮತ್ತು ಸಾಮಾಜಿಕ ಭೀತಿಯೇ ಕಾರಣ.
ಸ್ಪಾಟ್‌ಲೈಟ್ ಎಫೆಕ್ಟ್ ಸ್ಟೇಜ್ ಮೇಲೆ ಇರುವ ನಟನ ಮೇಲೆ ಹೇಗೆ ದೊಡ್ಡ ಲೈಟ್ ಬೀರಿರುತ್ತದೆಯೋ, ಹಾಗೆಯೇ ಎಲ್ಲರೂ ನಮ್ಮನ್ನೇ ಗಮನಿಸುತ್ತಿದ್ದಾರೆ ಎಂದು ನಾವೇ ಕಲ್ಪಿಸಿಕೊಳ್ಳುತ್ತೇವೆ. ನಮ್ಮ ಸಣ್ಣ ತಪ್ಪು ಎಲ್ಲರಿಗೂ ಎದ್ದು ಕಾಣುತ್ತದೆ ಎಂದು ಭಾವಿಸಿದರೂ, ವಾಸ್ತವದಲ್ಲಿ ಬೇರೆಯವರು ಅದನ್ನು ಗಮನಿಸುವುದೇ ಇಲ್ಲ.
ಸ್ವಯಂ ಪ್ರಜ್ಞೆ: ಸಾರ್ವಜನಿಕ ಜಾಗಗಳಲ್ಲಿ ಎಲ್ಲರ ಮುಂದೆ ನಮ್ಮ ಇಮೇಜ್ ಕಡಿಮೆಯಾಗಬಾರದು ಎನ್ನುವ ಕಾಳಜಿ ಹೆಚ್ಚಿರುತ್ತದೆ. ಇದರಿಂದ ಸಣ್ಣ ತಪ್ಪೂ ಸಹ ನಮಗೆ ದೊಡ್ಡದಾಗಿ ಕಾಣುತ್ತದೆ.
ಬೇರೆಯವರೂ ಅವರದೇ ಯೋಚನೆಯಲ್ಲಿರುತ್ತಾರೆ: ನಮಗೆ ನಮ್ಮ ತಪ್ಪು ದೊಡ್ಡದಾಗಿ ಕಂಡರೂ, ಉಳಿದವರು ತಮ್ಮದೇ ಕೆಲಸ, ಚಿಂತೆ ಅಥವಾ ವೈಯಕ್ತಿಕ ಸಮಸ್ಯೆಗಳ ಯೋಚನೆಯಲ್ಲಿರುತ್ತಾರೆ. ನೀವು ಮಾಡಿದ ತಪ್ಪನ್ನು ಅವರು ಕೆಲವೇ ಸೆಕೆಂಡುಗಳಲ್ಲಿ ಮರೆತುಬಿಡುತ್ತಾರೆ.
ಸಾಮಾಜಿಕ ಒಪ್ಪಿಗೆಯ ಬಯಕೆ: ಸುತ್ತಮುತ್ತಲಿನ ಜನ ನಮ್ಮನ್ನು ಒಪ್ಪಿಕೊಳ್ಳಬೇಕು ಎಂಬ ಬಯಕೆ ಇರುವುದರಿಂದ, ತಪ್ಪು ಮಾಡಿದಾಗ ‘ಅವರು ನಮ್ಮನ್ನು ಕೀಳಾಗಿ ಕಾಣುತ್ತಾರೇನೋ’ ಎನ್ನುವ ಭಯ ಮೂಡುತ್ತದೆ.
ವಾಸ್ತವವನ್ನು ಒಪ್ಪಿಕೊಳ್ಳಿ: ತಪ್ಪುಗಳು ಎಲ್ಲರಿಂದಲೂ ಆಗುತ್ತವೆ. ನಿಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರೂ ಎಂದೋ ಒಂದು ದಿನ ಇಂತಹ ಮುಜುಗರದ ಸನ್ನಿವೇಶ ಎದುರಿಸಿರುತ್ತಾರೆ.
ನಗಾಡಿ ಬಿಟ್ಟುಬಿಡಿ: ತಪ್ಪಾದಾಗ ನೀವೇ ಅದನ್ನು ಒಂದು ಜೋಕ್‌ನಂತೆ ತೆಗೆದುಕೊಂಡು ನಕ್ಕರೆ, ಬೇರೆಯವರಿಗೂ ಅದು ದೊಡ್ಡ ವಿಷಯವೆಂದು ಅನಿಸುವುದಿಲ್ಲ.
ಗಮನವನ್ನು ಬೇರೆಡೆಗೆ ಹರಿಸಿ: ಆ ಘಟನೆಯನ್ನೇ ಪದೇ ಪದೇ ಯೋಚಿಸುವ ಬದಲು, ಮುಂದಿನ ಕೆಲಸ ಅಥವಾ ಪಾಠದ ಕಡೆ ಗಮನ ಕೊಡಿ.
ಒಟ್ಟಾರೆ, ವಾಸ್ತವದಲ್ಲಿ ನಿಮ್ಮ ತಪ್ಪನ್ನು ಯಾರೂ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ, ಎಲ್ಲರೂ ತಮ್ಮದೇ ಚಿಂತೆಗಳಲ್ಲಿರುತ್ತಾರೆ. ಆದ್ದರಿಂದ ತಪ್ಪುಗಳನ್ನು ತಪ್ಪೆಂದು ಒಪ್ಪಿಕೊಂಡು, ನಕ್ಕು ಸುಮ್ಮನಾಗುವ ಅಭ್ಯಾಸ ಮಾಡಿಕೊಂಡರೆ ಯಾವ ಮುಜುಗರವೂ ನಿಮ್ಮನ್ನು ಕಾಡುವುದಿಲ್ಲ.