

ಪಾಟ್ನಾ: ಅಲ್ಲೊಂದು ಕಾರ್ ಅಪಘಾತಕ್ಕೀಡಾಗಿತ್ತು. ಕೆಲವರು ಏನಾಯಿತೆಂದು ರಕ್ಷಣೆಗೆ ದಾವಿಸಿ ಬಂದಿದ್ದರು. ಒಳಗೇನಿದೆ ಎಂದು ಹಲವರು ಇಣುಕಿ ನೋಡಿದರು. ಅಲ್ಲಿ ಅದೇನೋ ಕಾಣಿಸಿದೆ. ಕೂಡಲೇ ಜಾಗೃತರಾದಜನ ಕಾರ್ನ ಗ್ಲಾಸ್ ಹೊಡೆದು ಕೈಗೆ ಸಿಕ್ಕಿದಷ್ಟು ಬಾಚಿಕೊಂಡು ಹೋಗಿದ್ದಾರೆ. ಇಷ್ಟಕ್ಕೂ ಆ ಕಾರ್ನಲ್ಲಿ ಇದ್ದಿದ್ದಾದರೂ ಏನು?....ಮುಂದೆ ಓದಿ...
ಮಂಗಳವಾರ ಸಂಜೆ ಬಿಹಾರದ ಗಯಾ ಜಿಲ್ಲೆಯ ದೋಭಿ ಬಳಿ ಮದ್ಯ ತುಂಬಿದ್ದ ಕಾರ್ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅದರಲ್ಲಿದ್ದ ಮದ್ಯವನ್ನು ಕದಿಯಲು ಜನ ಮುಗಿಬಿದ್ದಿದ್ದರು. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ಜನರು ಕಾರಿನ ಗಾಜು ಒಡೆದು ಮದ್ಯದ ಬಾಟಲಿಗಳೊಂದಿಗೆ ಓಡಿ ಹೋಗುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಜನರು ಕಾರಿನೊಳಗೆ ಇದ್ದ ಮದ್ಯವನ್ನು ಲೂಟಿ ಮಾಡಿದ್ದರು.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಇದರ ವೀಡಿಯೊ ವೈರಲ್ ಆಗಿದ್ದು, ಇರುವೆಗಳು ಬೆಲ್ಲಕ್ಕೆ ಮುತ್ತಿಕೊಂಡಂತೆ ಜನರು ಕಾರ್ನಲ್ಲಿ ತುಂಬಿದ್ದ ಮದ್ಯಕ್ಕಾಗಿ ಸುತ್ತುವರಿದಿದ್ದಾರೆ.
ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿರುವುದರಿಂದ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳು ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಶಾಖಪಟ್ಟಣಂನಿಂದ ಅಕ್ರಮವಾಗಿ 1.5ಲಕ್ಷ ರೂ.ಮೌಲ್ಯದ ನಕಲಿ ಮದ್ಯವನ್ನು ತರಿಸಲಾಗುತ್ತಿತ್ತು. ಆದರೆ ಮದ್ಯ ಸಾಗಿಸುತ್ತಿದ್ದವರು ಪರಾರಿಯಾಗಿದ್ದೇ ತಡ, ಜನ ಸಿಕ್ಕಿದ್ದೇ ಚಾನ್ಸ್ ಎಂದು ಮದ್ಯದ ಬಾಟಲಿಗಳನ್ನು ಹೊತ್ತೊಯ್ದರು.