

ಶಿವಮೊಗ್ಗ: ಕಾರು- ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಳಿಯ ಮಂಚಿಕೊಪ್ಪದಲ್ಲಿ ನಡೆದಿದೆ.
ಹಲುಗಿನಕೊಪ್ಪದ ಮಲ್ಲಿಕಾರ್ಜುನ್ ಅವರ ಪತ್ನಿ ಜ್ಯೋತಿ(30, 4 ವರ್ಷದ ಪುತ್ರಿ ಸೌಜನ್ಯ(4) ಹಾಗೂ ತಾಯಿ ಗಂಗಮ್ಮ(50) ಮೃತ ದುರ್ದೈವಿಗಳು. ಇವರೆಲ್ಲರೂ ಶಿರಾಳಕೊಪ್ಪದಿಂದ ಹುಲಗಿನಕೊಪ್ಪ ಕಡೆಗೆ ಭಾನುವಾರ ರಾತ್ರಿ ಮಲ್ಲಿಕಾರ್ಜುನ್ರ ಬೈಕ್ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಹಿರೇಕರೂರು ಕಡೆಯಿಂದ ಶಿವಮೊಗ್ಗದತ್ತ ಕಾರೊಂದು ಹೋಗುತ್ತಿತ್ತು.
ಮಾರ್ಗಮಧ್ಯೆ ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಬಳಿ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಮಲ್ಲಿಕಾರ್ಜುನ್ ಸ್ಥಿತಿ ಗಂಭೀರವಾಗಿದೆ. ಬೈಕ್ನಲ್ಲಿದ್ದ ತಾಯಿ-ಪತ್ನಿ-ಮಗಳು ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಮಗಳು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಳು. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಕೊನೆಯುಸಿರೆಳೆದರೆ, ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗಂಗಮ್ಮ ಮೃತಪಟ್ಟರು. ಶಿರಾಳಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.