

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಅಪಘಾತವೊಂದಕ್ಕೆ ಬಾಲಕ ಬಲಿಯಾಗಿದ್ದಾನೆ. ರಸ್ತೆ ಬದಿಯಲ್ಲಿ ನಿಂತಿದ್ದ ಅಮಾಯಕನ ಪ್ರಾಣಹರಣಕ್ಕೆ ಕಾರಣನಾದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ತಿಕ್ (12) ಸಾವಿಗೀಡಾದ ವಿದ್ಯಾರ್ಥಿ. ಮಂಗಳೂರು ತಾಲೂಕಿನ ಮುಡಿಪು ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಮುಡಿಪು ಕೃಷ್ಣನಗರ ನಿವಾಸಿ ಧರ್ನಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧರ್ನಪ್ಪ ಚಲಾಯಿಸುತ್ತಿದ್ದ ಕಾರು ಮೊದಲು ಪೊಲೀಸ್ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಬೈಕ್ ಮತ್ತು ಆಟೋರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದು, ನಂತರ ರಸ್ತೆ ಪಕ್ಕ ನಿಂತಿದ್ದ ಕಾರ್ತಿಕ್ಗೆ ಅಪ್ಪಳಿಸಿದೆ. ತೀವ್ರ ಗಾಯಗೊಂಡ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.