

ಉತ್ತರಕನ್ನಡ: ಶಾಲೆಯ ವತಿಯಿಂದ ಪಿಕ್ನಿಕ್ಗೆ ಹೋಗಿದ್ದ ಬಾಲಕನೊಬ್ಬ ನಾಪತ್ತೆಯಾಗಿದ್ದಾನೆ. ಹದಿನಾರು ವರ್ಷದ ಹುಡುಗ ಕಣ್ಮರೆಯಾಗಿದ್ದು, ಸ್ಥಳೀಯರು ಆತನಿಗಾಗಿ ಹುಡುಕಾಟ ನಡೆಸಲಾರಂಭಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಪ್ರಕಾಶ ಪಟಕಾರೆ (16) ಕಣ್ಮರೆಯಾದ ಬಾಲಕ. ಗುಳ್ಳಾಪುರ ಪ್ರೌಢಶಾಲೆ ವತಿಯಿಂದ ಪಿಕ್ನಿಕ್ಗೆ ಕರೆದುಕೊಂಡು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಈತ ಗುಳ್ಳಾಪುರದ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿ.
ಪಿಕ್ನಿಕ್ಗೆ ತೆರಳಿದ್ದ ಸಂದರ್ಭದಲ್ಲಿ ಈತ ನದಿಯಲ್ಲಿ ಕೈತೊಳೆಯಲು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಈತನಿಗಾಗಿ ಸ್ಥಳೀಯ ಮೀನುಗಾರರು ಹುಡುಕಾಟ ಆರಂಭಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.