ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಟಿಟಿ ಡ್ರೈವರ್ ಅರೆಸ್ಟ್

Arrest
Published on

ಪಣಜಿ: ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಚಾಲಕನೊಬ್ಬ ಅತ್ಯಾಚಾರ ಎಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮುಂಬೈನವಳಾಗಿದ್ದು, ಗೋವಾದಲ್ಲಿ ಈ ಪ್ರಕರಣ ನಡೆದಿದೆ. ಗೋವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದಕ್ಷಿಣ ಗೋವಾದ ಮಾರ್ಮುಗಾವೊ ಎಂಬಲ್ಲಿನ ಜುವಾರಿನಗರದ ನಿವಾಸಿ ಚಂದ್ರಶೇಖರ ವಾಸು ಲಮಾಣಿ ಎಂಬಾತನೇ ಅತ್ಯಾಚಾರ ಆರೋಪಿ. ಈತನ ವಿರುದ್ಧ ಇಂಜಿನಿಯರಿಂಗ್ ವಿದ್ಯಾರ್ಥಿನಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಮೇರೆಗೆ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿ ಸೇರಿ ಹದಿನಾಲ್ಕು ಮಂದಿ ಇತ್ತೀಚೆಗೆ ಗೋವಾಗೆ ಬಂದಿದ್ದು, ಇಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಸಲುವಾಗಿ ಟೆಂಪೊ ಟ್ರಾವೆಲರ್​ವೊಂದನ್ನು ಬಾಡಿಗೆಗೆ ಪಡೆದಿದ್ದರು. ಅದರ ಚಾಲಕ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಈ ಯುವತಿ ಆರೋಪಿಸಿದ್ದಾಳೆ.

ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದ್ದು, ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಐದು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net