ಲ್ಯಾಪ್‌ಟಾಪ್ ಕಳ್ಳನ ಸೆರೆ; 50 ಲ್ಯಾಪ್‌ಟಾಪ್ ಜಪ್ತಿ

Capture
Published on

ಬೆಂಗಳೂರು: ಟೊಮ್ಯಾಟೊ ಬೆಳೆಯಿಂದ ಅನುಭವಿಸಿದ್ದ ನಷ್ಟವನ್ನು ತುಂಬಿಕೊಳ್ಳಲು ಕೆಲಸಕ್ಕಿದ್ದ ಕಂಪನಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದ ನೌಕರನನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಹೊಸೂರು ತಾಲೂಕಿನ ತೋರಪಲ್ಲಿ ನಿವಾಸಿ ಮುರುಗೇಶ್ (29) ಬಂಧಿತ. ವೈಟ್‌ಫೀಲ್ಡ್‌ನ ಐಟಿಪಿಎಲ್‌ನಲ್ಲಿನ ಟೆಲಿಕಲರ್ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಕೆಲಸಕ್ಕಿದ್ದ. ಬಂಧಿತನಿಂದ 22 ಲಕ್ಷ ರೂ. ಬೆಲೆ ಬಾಳುವ 50 ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಊರಿನಲ್ಲಿ ಟೊಮ್ಯಾಟೊ ಬೆಳೆದು 25 ಲಕ್ಷ ರೂ. ನಷ್ಟ ಅನುಭವಿಸಿದ್ದ. ಕೈಸಾಲ ಮಾಡಿಕೊಂಡು ಬಡ್ಡಿ ಪಾವತಿಸಬೇಕಾದ ಸಂಕಷ್ಟ ಶುರುವಾದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ದಿನಕ್ಕೊಂದು ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ.

ಕದ್ದ ಲ್ಯಾಪ್‌ಟಾಪ್‌ಗಳನ್ನು ಹೊಸೂರಿನಲ್ಲಿ ಇರುವ ಹಳೆಯ ಲ್ಯಾಪ್‌ಟಾಪ್ ರಿಪೇರಿ ಮತ್ತು ಮಾರಾಟ ಮಳಿಗೆಗೆ ಮಾರಾಟ ಮಾಡುತ್ತಿದ್ದ. ಅಂಗಡಿ ಮಾಲೀಕ ಬಿಲ್ ಕೇಳಿದಾಗ ಕೊಡುವುದಾಗಿ ಹೇಳಿ 15 ರಿಂದ 18 ಸಾವಿರ ರೂ. ಪಡೆದು ಬರುತ್ತಿದ್ದ. ಇದೇ ರೀತಿಯಾಗಿ 45 ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಿ ಸಾಲದ ಬಡ್ಡಿ ಪಾವತಿ ಮಾಡಿದ್ದ.

ಮತ್ತೊಂದೆಡೆ ಕಂಪನಿಯಲ್ಲಿ ಲ್ಯಾಪ್‌ಟಾಪ್‌ಗಳ ನಾಪತ್ತೆ ಸಂಬಂಧ ಕಂಪನಿ ಮುಖ್ಯಸ್ಥರು ವೈಟ್‌ಫೀಲ್ಡ್ ಠಾಣೆಗೆ ದೂರು ಸಲ್ಲಿಸಿದ್ದರು. ಇನ್‌ಸ್ಪೆಕ್ಟರ್ ಗುರುಪ್ರಸಾದ್, ಎಸ್‌ಐಗಳಾದ ನಾಗರಾಜು, ಸುನೀಲ್ ನೇತೃತ್ವದ ತಂಡವು ಕಂಪನಿ ನೌಕರರ ವಿಚಾರಣೆ ನಡೆಸಿದಾಗ ಮುರುಗೇಶ್ ಮೇಲೆ ಅನುಮಾನ ಬಂದಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 5 ಲ್ಯಾಪ್‌ಟಾಪ್‌ಗಳು ಪತ್ತೆಯಾಗಿವೆ. ಈತ ಕೊಟ್ಟ ಸುಳಿವಿನ ಮೇರೆಗೆ ಮಾರಾಟ ಮಾಡಿದ್ದ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net