

ಚಂಡೀಗಢ: ಪಂಜಾಬ್ ಕಾಂಗ್ರೆಸ್ನಲ್ಲಿ ಬಿರುಕು ಉಂಟಾಗಿರುವ ವಿಚಾರ ಅನೇಕ ದಿನಗಳಿಂದ ಸುದ್ದಿಯಾಗುತ್ತಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರೋಧದ ನಡುವೆಯೂ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹೈಕಮಾಂಡ್ ನೇಮಕ ಮಾಡಿದೆ. ಅದರ ಬೆನ್ನಲ್ಲೇ ಸಿಎಂ ಔತಣ ಕೂಟವೊಂದನ್ನು ಏರ್ಪಡಿಸಿದ್ದು ಸಾಕಷ್ಟು ಕುತೂಹಲಗಳಿಗೆ ನಾಂದಿ ಹಾಡಿದೆ.
ಅಮರಿಂದರ್ ಸಿಂಗ್ ಅವರು ಜುಲೈ 21ರಂದು ಪಂಚಕುಲದಲ್ಲಿ ಮಧ್ಯಾಹ್ನದ ಔತಣ ಕೂಟವನ್ನು ಆಯೋಜಿಸಿದ್ದಾರೆ. ಅದಕ್ಕೆ ಎಲ್ಲ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗಿದೆ. ಆದರೆ ಪಕ್ಷದ ಅಧ್ಯಕ್ಷ ನವಜೋತ್ ಸಿಂಗ್ಗೆ ಆಹ್ವಾನ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಯಾವ ಕಾರಣಕ್ಕಾಗಿ ಈ ಔತಣ ಕೂಟ ನಡೆಸಲಾಗುತ್ತಿದೆ ಎನ್ನುವ ಮಾಹಿತಿಯಿಲ್ಲ. ಆದರೆ ನವಜೋತ್ ಸಿಂಗ್ಗೆ ಆಹ್ವಾನ ಇಲ್ಲದಿರುವುದು, ಸಿಎಂ ಮತ್ತು ಅವರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸಿದಂತಾಗಿದೆ.
ನವಜೋತ್ ಸಿಂಗ್ರನ್ನು ಭಾನುವಾರದಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರೊಂದಿಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಂಗತ್ ಸಿಂಗ್ ಗಿಲ್ಜಿಯನ್, ಸುಖ್ವಿಂದರ್ ಸಿಂಗ್ ಡ್ಯಾನಿ, ಪವನ್ ಗೋಯೆಲ್, ಕುಲ್ಜಿತ್ ಸಿಂಗ್ ನಗ್ರ ಅವರು ನೇಮಕಗೊಂಡಿದ್ದಾರೆ. ಈ ಪಟ್ಟಿ ಹೊರಬೀಳುತ್ತಿದ್ದಂತೆಯೇ ಅಮರಿಂದರ್ ಸಿಂಗ್ ಹೊರೆತುಪಡಿಸಿದ ಪಕ್ಷದ ನಾಯಕರೆಲ್ಲರೂ ನವಜೋತ್ ಸಿಂಗ್ಗೆ ಶುಭ ಹಾರೈಸಿದ್ದಾರೆ. (ಏಜೆನ್ಸೀಸ್)