ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕ್ಯಾಂಟರ್ ವಾಹನ

accident-15
Published on

ಬೆಂಗಳೂರು: ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ವಾಹನ ರಸ್ತೆಗೆ ಉರುಳಿದ ಘಟನೆ ಶನಿವಾರ ರಾತ್ರಿ ೭.೩೦ರ ಸುಮಾರಿಗೆ ಆಂಧ್ರಹಳ್ಳಿಯಲ್ಲಿ ನಡೆದಿದೆ.
ರಸ್ತೆಗೆ ಕ್ಯಾಂಟರ್ ಉರುಳಿದ ಪರಿಣಾಮ ಕೆಲ ಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡುವಂತಾಗಿತ್ತು. ಚಾಲಕ ಸಿಮೆಂಟ್ ಲೋಡ್ ಮಾಡಿಕೊಂಡು ಹೋಗುವಾಗ ಆಂಧ್ರಹಳ್ಳಿ ರಸ್ತೆಯಲ್ಲಿ ರಸ್ತೆ ಗುಂಡಿ ಎದುರಾಗಿದೆ. ಈ ವೇಳೆ ಗುಂಡಿ ತಪ್ಪಿಸುವ ಸಲುವಾಗಿ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿದ ಕ್ಯಾಂಟರ್ ರಸ್ತೆಗೆ ಉರುಳಿ ಬಿದ್ದಿದೆ. ಈ ವೇಳೆ ಚಾಲಕನಿಗೆ ಸಣ್ಣ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು, ಕ್ರೇನ್ ತರಿಸಿ ರಸ್ತೆಯಲ್ಲಿ ಬಿದ್ದಿದ್ದ ಕ್ಯಾಂಟರ್ ತೆರವುಗೊಳಿಸಿದ್ದಾರೆ. ತೆರವು ಮಾಡುವವರಿಗೆ ಸುಮಾರು ಒಂದು ತಾಸು ಆಂಧ್ರಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿ ಸವಾರರು ಪರದಾಡಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net