ಎಳ್ಳಷ್ಟೂ ಅಕ್ರಮ ಸಹಿಸುವುದಿಲ್ಲ!: ಎನ್​ಟಿಎಗೆ ಸುಪ್ರೀಂ ಕೋರ್ಟ್ ಚಾಟಿ

nation
Published on

ನವದೆಹಲಿ: ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವ ನೀಟ್-ಯುಜಿ 2024ರ ಪರೀಕ್ಷೆ ಅಕ್ರಮದ ವಿಚಾರವಾಗಿ ಸುಪ್ರೀಂಕೋರ್ಟ್ ಕೆಂಡಾಮಂಡಲವಾಗಿದೆ. ಯಾರಾದರೂ ಮೋಸ ಮಾಡಿ ವೈದ್ಯರಾಗುತ್ತಾರೆ ಎನ್ನುವುದನ್ನು ಕಲ್ಪಿಸಿಕೊಳ್ಳಿ. ಅಂಥವರು ನಿಜವಾಗಿಯೂ ಸಮಾಜಕ್ಕೆ ತುಂಬಾ ಅಪಾಯಕಾರಿ ಆಗಿರುತ್ತಾರೆ. ಪರೀಕ್ಷೆ ನಡೆಸುವಲ್ಲಿ ‘ಶೇಕಡ 0.001’ರಷ್ಟು ನಿರ್ಲಕ್ಷ್ಯ ತೋರಿದ್ದರೂ ಅದನ್ನು ಕಠಿಣವಾಗಿ ನಿರ್ವಹಿಸಬೇಕೆಂದು ನ್ಯಾಯಾಲಯ ಎನ್​ಟಿಎಗೆ (ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ) ಮಂಗಳವಾರ ಖಡಕ್ ಎಚ್ಚರಿಕೆ ನೀಡಿದೆ. ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ತಯಾರಿ ನಡೆಸುತ್ತಾರೆ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂಕೋರ್ಟ್, ಪ್ರಸ್ತುತ ವಿವಾದದ ಕುರಿತು ಸಲ್ಲಿಕೆ ಆಗಿರುವ ಅರ್ಜಿಗಳನ್ನು ತನಗೆ ‘ವಿರೋಧಿಯಾದುದು’ ಎಂದು ಎನ್​ಟಿಎ ಭಾವಿಸಬಾರದು ಎಂದು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಎಸ್.ವಿ.ಎನ್. ಭಟ್ಟಿ ಇದ್ದ ರಜಾ ಕಾಲದ ಪೀಠ, ಪ್ರಾಧಿಕಾರದ ಪರವಾಗಿ ಹಾಜರಾದ ವಕೀಲರಿಗೆ ಸೂಚಿಸಿತು.

ಮೇ 5ರಂದು ನಡೆದ ಪರೀಕ್ಷೆಗಳಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿದ್ದ ವಿಚಾರದ ಸಹಿತ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಪರೀಕ್ಷೆ ನಡೆಸುವ ಹೊಣೆಗಾರಿಕೆ ಹೊಂದಿರುವ ಸಂಸ್ಥೆಯನ್ನು ಪ್ರತಿನಿಧಿಸುವ ನೀವು ದೃಢವಾಗಿರಬೇಕು. ಯಾವುದಾದರೂ ದೋಷ ಆದಲ್ಲಿ; ನಿಶ್ಚಿತವಾಗಿಯೂ ದೋಷ ನಡೆದಿದೆ, ಇದು ನಾವು ಕೈಗೊಳ್ಳುವ ಕ್ರಮವಾಗಿದೆ ಎಂಬ ಸ್ಪಷ್ಟತೆ ತೋರಬೇಕು. ಕನಿಷ್ಠ ಪಕ್ಷ ಅದಾದರೂ ನಿಮ್ಮ ಕಾರ್ಯಕ್ಷಮತೆಯಲ್ಲಿ ವಿಶ್ವಾಸವನ್ನು ಉತ್ತೇಜಿಸುತ್ತದೆ ಎಂದು ಎನ್​ಟಿಎ ವಕೀಲರಿಗೆ ಪೀಠ ಹೇಳಿತು. ಅಧಿಕಾರಿಗಳು ಸಕಾಲದಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದ ನ್ಯಾಯಾಲಯ, ಬಾಕಿ ಇರುವ ಇತರ ಅರ್ಜಿಗಳ ಜತೆ ಜುಲೈ 8ರಂದು ವಿಚಾರಣೆ ನಡೆಸಲಾಗುತ್ತದೆ ಎಂದಿತು. ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶನ ಕೋರಿರುವ ಅರ್ಜಿಯೂ ಅದರಲ್ಲಿ ಸೇರಿದೆ.

ಸಿಬಿಐ ತನಿಖೆಗೆ ಆಗ್ರಹ: ವೈದ್ಯಕೀಯ ಪ್ರವೇಶಕ್ಕೆ ನೀಟ್ ಪರೀಕ್ಷೆಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಕುರಿತು ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕೆಲವು ಆಕಾಂಕ್ಷಿಗಳು ಸುಪ್ರೀಂಕೋರ್ಟ್​ಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕೋರ್ಟ್ ಜುಲೈ 8ರಂದು ಅವುಗಳ ವಿಚಾರಣೆ ನಡೆಸಲಿದೆ. ಅಷ್ಟರೊಳಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತಿತರ ಅವ್ಯವಹಾರಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ಏನಿದು ನೀಟ್ ವಿವಾದ?

. 2024ರ ಮೇನಲ್ಲಿ ನಡೆದಿದ್ದ ನೀಟ್ ಪರೀಕ್ಷೆ

. 4750 ಕಡೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು

. ಜೂ.4ರಂದು ಪ್ರಕಟವಾಗಿದ್ದ ಫಲಿತಾಂಶ

. 1563 ವಿದ್ಯಾರ್ಥಿಗಳಿಗಷ್ಟೇ ಗ್ರೇಸ್ ಮಾರ್ಕ್ಸ್

? ಕೆಲವು ಕೋಚಿಂಗ್ ಸೆಂಟರ್​ಗಳ ಪ್ರಾಬಲ್ಯ

. ಪೂರ್ಣ ಪ್ರಮಾಣದ ಫಲಿತಾಂಶದ ಅಚ್ಚರಿ

. 69 ವಿದ್ಯಾರ್ಥಿಗಳಿಗೆ 720ಕ್ಕೆ 720 ಅಂಕ

. ಸುಪ್ರೀಂಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ

. 1563 ವಿದ್ಯಾರ್ಥಿಗಳ ಅಂಕಪಟ್ಟಿಯೇ ರದ್ದು

. ಎನ್​ಟಿಎ ಪರಿಶೀಲನಾ ಸಮಿತಿಯ ನಿರ್ಧಾರ

. ಜೂನ್ 23ರಂದು ನಿಗದಿಯಾದ ಮರುಪರೀಕ್ಷೆ

. ಜೂ.30ರ ಮೊದಲು ಫಲಿತಾಂಶ ಪ್ರಕಟ ಸಾಧ್ಯತೆ

ಮುಂದೇನಾಗಲಿದೆ?

. ಗ್ರೇಸ್ ಮಾಕ್ಸ್ ರದ್ದಾದವರಿಗೆ 2 ಆಯ್ಕೆ ಮುಕ್ತ

. 1563 ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು

. ಇಲ್ಲ ಗ್ರೇಸ್ ಮಾರ್ಕ್ಸ್ ಇಲ್ಲದ ಅಂಕ ಒಪ್ಪಬೇಕು

ಎನ್​ಟಿಎಗೆ ಸರ್ಜರಿ?

. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ ಮುಜುಗರ

. ಸ್ವಾಯತ್ತ ಸಂಸ್ಥೆಯ ಕಾರ್ಯವೈಖರಿಗೆ ಸವಾಲು

. ಮತ್ತಷ್ಟು ಸುಧಾರಣೆಗೆ ಮುಂದಾದ ಕೇಂದ್ರ

. ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಸುಳಿವು

ಪ್ರಧಾನಿ ಮೌನಕ್ಕೆ ರಾಹುಲ್ ಟೀಕೆ: ಈ ನಡುವೆ, ನೀಟ್ ಪರೀಕ್ಷಾ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ‘ಮೌನ’ವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಕಠಿಣವಾದ ಕಾನೂನು ರೂಪಿಸುವ ವಿಚಾರದಲ್ಲಿ ತಮ್ಮ ಪಕ್ಷ ಬೀದಿಗಳಿಂದ ಹಿಡಿದು ಸಂಸತ್ತಿನವರೆಗೆ ಯುವಜನರ ದನಿಯನ್ನು ಬಲವಾಗಿ ಪ್ರತಿಧ್ವನಿಸಲಿದೆ ಎಂದು ರಾಹುಲ್ ಹೇಳಿದ್ದಾರೆ. ನೀಟ್ ವಿವಾದದ ಸಂಬಂಧ ಬಿಹಾರ, ಗುಜರಾತ್ ಮತ್ತು ಹರ್ಯಾಣಗಳಿಂದ ಅನೇಕ ಜನರನ್ನು ಬಂಧಿಸಿರುವುದನ್ನು ನೋಡಿದರೆ ಬಿಜೆಪಿ ಆಡಳಿತದ ಈ ರಾಜ್ಯಗಳು ಪ್ರಶ್ನೆ ಪತ್ರಿಕೆ ಸೋರಿಕೆಗಳ ‘ಕೇಂದ್ರಬಿಂದು’ ಆಗಿರುವುದನ್ನು ತೋರಿಸುತ್ತದೆ ಎಂದು ಕುಟುಕಿದ್ದಾರೆ.

ಸಂಜೆವರೆಗೂ ಕಲಾಪ ನಡೆಸಲು ರೆಡಿ: ಅರ್ಜಿದಾರರ ಪ್ರಶ್ನೆಯೊಂದರ ಬಗ್ಗೆ ವಕೀಲರು ಪ್ರಸ್ತಾಪಿಸಿದಾಗ, ‘ಎನ್​ಟಿಎ, ಕೇಂದ್ರ ಅದಕ್ಕೆ ಪ್ರತಿಕ್ರಿಯಿಸುತ್ತವೆ’ ಎಂದು ನ್ಯಾಯಮೂರ್ತಿಗಳು ಕಟುವಾಗಿ ಹೇಳಿದರು. ‘ನಿಮ್ಮ ವಾದದ ಉದ್ದೇಶ ತಿಳಿದುಕೊಳ್ಳಲು ನಮಗೆ ಬಿಡಿ. ಸಂಜೆವರೆಗೂ ಕಲಾಪ ನಡೆಸಲು ಸಿದ್ಧ ಎಂದರು.

ನೀಟ್ ನಿರಾಕರಿಸುತ್ತಾ ರಾಜ್ಯ?: ಎಂಬಿಬಿಎಸ್​ಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಬದಲು ರಾಜ್ಯಮಟ್ಟದಲ್ಲೇ ಆಯ್ಕೆ ನಡೆಯಲಿ ಎಂಬ ತಮಿಳುನಾಡು ಸರ್ಕಾರದ ವಾದವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಸಿದ್ದಾರೆ. ತಮಿಳುನಾಡು ನೀಟ್ ಬೇಡವೆಂದು ಕೋರಿಕೆ ಸಲ್ಲಿಸಿದೆ. ಆದರೆ ಅದಕ್ಕಿನ್ನೂ ಮಾನ್ಯತೆ ಸಿಕ್ಕಿಲ್ಲ. ನಾವೂ ತಮಿಳುನಾಡಿನ ರೀತಿ ಯೋಚಿಸಬೇಕಿದೆ. ನೀಟ್​ನಲ್ಲಿ ಅಕ್ರಮ ಆಗಿದೆ ಎಂದು ಕೇಂದ್ರ ಸಚಿವರೇ ಒಪ್ಪಿಕೊಂಡಿದ್ದಾರೆ. ಇನ್ನಾದರೂ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ ಎಂದು ಡಿಕೆಶಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net