

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಇತರ ಪೊಲೀಸರು ಕಿರುಕುಳ ನೀಡುತ್ತಿದ್ದು, ನಾನು ಕೋರ್ಟ್ ಹಾಲ್ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಪಾಡಿ...’ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಹೈಕೋರ್ಟ್ ನ್ಯಾಯಮೂರ್ತಿಗಳ ಬಳಿ ಅಳಲನ್ನು ತೋಡಿಕೊಂಡಿದ್ದಾರೆ.
ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಸಂಪೂರ್ಣ ಘಟನೆಯನ್ನು ಸಮಾಧಾನದಿಂದ ಆಲಿಸಿ ಆರೋಪ ನಿಜವಾಗಿದ್ದರೆ ಪೊಲೀಸರು ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೌಖಿಕ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿ ನಾಗಪ್ರಸನ್ನ, ಬೆಳಗಿನ ಕಲಾಪ ಮುಗಿಯುತ್ತಿದ್ದಂತೆ ಊಟಕ್ಕೆ ತೆರಳಲು ಸಿದ್ಧರಾದರು. ಆಗ ಕೋರ್ಟ್ ಮುಂದೆ ಕೈಮುಗಿದು ಹಾಜರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಎಂ.ಜಿ. ಶಾಂತಕುಮಾರ ಸ್ವಾಮಿ, ‘‘ನನಗೆ ವಿವಾಹ ನಿಶ್ಚಯವಾಗಿ ರದ್ದಾಗಿತ್ತು. ಬಳಿಕ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಸ್ಥಳೀಯ ಕಾಂಗ್ರೆಸ್ ಶಾಸಕರು ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದನ್ನು ರೆಕಾರ್ಡ್ ಮಾಡಿ, ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದೀಯಾ? ಎಂದು ಪ್ರಶ್ನಿಸಿ ಸಾಗರದಲ್ಲಿ ನನ್ನನ್ನು ಇರಲು ಬಿಡುತ್ತಿಲ್ಲ. ನಾನು ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆಗೆ ಮನವಿ ಮಾಡಿದ್ದು, ಆದು ಆಗಿಲ್ಲ, ಹಾಗಾಗಿ ನನಗೆ ರಕ್ಷಣೆ ನೀಡಬೇಕು’ ಎಂದು ಕೋರಿದರು.
ಅಲ್ಲದೆ, ‘‘ಸಾಗರದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯು ಜು.22ರಂದು ಹೈಕೋರ್ಟ್‌ನಲ್ಲಿ ನಿಮ್ಮ ಪೀಠದ ಮುಂದೆಯೇ ನಡೆದಿತ್ತು. ಪಾರ್ಟಿ ಇನ್ ಪರ್ಸನ್ ಆಗಿ ಈ ಪ್ರಕರಣಗಳಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದು, ವಕೀಲರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದರಿಂದ, ಹೊಸದಾಗಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿ ಅರ್ಜಿ ವಿಲೇವಾರಿ ಮಾಡಲಾಗಿತ್ತು. ಈ ಸಂಬಂಧ ಯೂಟ್ಯೂಬ್‌ನಲ್ಲಿನ ಲೈವ್ ಸ್ಟ್ರೀಮ್ ವಿಡಿಯೋ ಆಧರಿಸಿ, ತಕ್ಷಣ ಸುಳ್ಳು ಗಾಂಜಾ ಪ್ರಕರಣದಲ್ಲಿ ನನ್ನನ್ನು ಬಂಧಿ ಸಿ ಶಿವಮೊಗ್ಗ ಜೈಲಿಗೆ ಕಳುಹಿಸಿದ್ದರು’ ಎಂದು ವಿವರಿಸಿದರು.
ಮತ್ತೆ ಮುಂದುವರಿದು ‘‘ಹೈಕೋರ್ಟ್‌ನಲ್ಲಿ ಪೊಲೀಸರ ಬಗ್ಗೆ ದೂರುತ್ತೀಯಾ? ಎಂದು ಸಾಗರದ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ನನ್ನನ್ನು ದಂಡಿಸಿದ್ದಾರೆ. ಗಾಂಜಾ ಪ್ರಕರಣದ ಜತೆಗೆ ತಕ್ಷಣ ಬೇರೆ ಬೇರೆ ಸೆಕ್ಷನ್ ಅನ್ವಯಿಸಿದ್ದಾರೆ. ರಿವಾಲ್ವಾರ್ ಇಟ್ಟು ಎನ್‌ಕೌಂಟರ್ ಮಾಡಲಾಗುವುದು ಎಂದು ಹೇಳಿದ್ದಾರೆ. ರೌಡಿ ಶೀಟರ್ ತೆರೆಯಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ. ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡಿದ್ದಾರೆ’ ಎಂದು ಹೇಳುತ್ತಾ ಕಣ್ಣೀರು ಹಾಕಿದರು.
ಆಗ ನ್ಯಾಯಪೀಠವು ‘‘ನೀವು ಹೇಳಿರುವುದೆಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತದೆ. ಡಿವೈಎಸ್‌ಪಿ ಈ ರೀತಿ ನಡೆದುಕೊಂಡಿದ್ದರೆ ಖಂಡಿತವಾಗಿಯೂ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದ ನ್ಯಾಯಪೀಠ ಹೆಚ್ಚುವರಿ ಸರಕಾರಿ ವಿಶೇಷ ಅಭಿಯೋಜಕ ಬಿ.ಎನ್. ಜಗದೀಶ್ ಅವರಿಗೆ ನೋಡಿ, ಇಂಥ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್‌ಪಿಗೆ ತಿಳಿಸಿ, ಅರ್ಜಿದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ.ಇಲ್ಲವಾದರೆ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜತೆಗೆ ಅರ್ಜಿದಾರರಿಗೆ ನೀವು ಹೆದರಬೇಡಿ, ನಾವು ಇದ್ದೇವೆ, ನಿಮಗೆ ಎಲ್ಲ ರೀತಿಯ ಭದ್ರತೆ ನೀಡಲಾಗುವುದು. ಇದನ್ನು ನೋಡಿ. (ಅರ್ಜಿದಾರರನ್ನು ಕುರಿತು) ಹೆದರಬೇಡಿ, ನಾವು ಅವರಿಗೆ ಹೇಳಿದ್ದೇವೆ ಎಂದರು.