ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಮತ್ತೊಂದು ಹಿನ್ನಡೆ; ಇನ್ಮುಂದೆ ರಸ್ತೆಗೆಂದು ಕೃಷಿ ಜಮೀನು ಪಡೆಯುವಂತಿಲ್ಲ..!

Road Estate
Published on

ಬೆಂಗಳೂರು: ಭೂ ಪರಿವರ್ತನೆ ವಿನ್ಯಾಸದ ಅನುಮೋದನೆ ಇಲ್ಲದೆ ಕೃಷಿ ಜಮೀನನ್ನು ರಸ್ತೆಗೆಂದು ರೈತರಿಂದ ಪರಿತ್ಯಾಜನ ಪತ್ರವನ್ನು ಸ್ಥಳೀಯ ಸಂಸ್ಥೆಗಳು ಪಡೆಯುವಂತಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರಿಂದ ಬಡವರು ಮತ್ತು ಮಧ್ಯಮವರ್ಗದವರಿಗೆ ಸೂರು ಕಲ್ಪಿಸುವ ರೆವಿನ್ಯೂ ಲೇಔಟ್‌ಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೊಸ ಬಡಾವಣೆ ನಿರ್ಮಾಣದ ವೇಳೆ ರಸ್ತೆ ಇಲ್ಲದಿದ್ದರೆ ರಸ್ತೆಗೆ ಅಗತ್ಯ ಇರುವಂತಹ ಜಾಗವನ್ನು ಭೂ ಮಾಲೀಕರ ಕಡೆಯಿಂದ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳಿಗೆ ‘ಪರಿತ್ಯಾಜನ ಪತ್ರ’ ನೋಂದಣಿ ಮಾಡಿಸುತ್ತಿದ್ದರು. ಅಲ್ಲಿಗೆ ಭೂಮಾಲೀಕ ರಸ್ತೆಗೆಂದು ಸ್ಥಳೀಯ ಸಂಸ್ಥೆಗೆ ಪರಿತ್ಯಾಜನ ಪತ್ರ ಮಾಡಿಸಿಕೊಟ್ಟಾಗ ಅದನ್ನೇ ಆಧಾರವಾಗಿಟ್ಟುಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳು ರಸ್ತೆ ಮಾಡಿಕೊಳ್ಳುತ್ತಿದ್ದರು. ಭೂ ಮಾಲೀಕನಿಗೆ ಇಂತಿಷ್ಟು ಹಣ ಕೊಡುತ್ತಿದ್ದರು. ಹೊಸ ಸುತ್ತೋಲೆ ಪ್ರಕಾರ, ಪರಿತ್ಯಾಜನ ಪತ್ರ ಪಡೆಯುವ ಮುನ್ನ ಕೆಲವೊಂದು ಮಾರ್ಗಸೂಚಿ ಪಾಲನೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

ಎಲ್ಲ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು, ಯೋಜನಾ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧವಾದ ಕೃಷಿ ಜಮೀನನ್ನು ಭೂಮಾಲೀಕರಿಂದ ನೇರವಾಗಿ ಹಸ್ತಾಂತರಿಸಿಕೊಳ್ಳುವಂತಿಲ್ಲ. ಕೃಷಿ ಭೂಮಿ ಪಡೆಯುವಾಗ ಭೂ ಪರಿವರ್ತನೆ ವಿನ್ಯಾಸ ಅನುಮೋದನೆ ಪಡೆಯಬೇಕು. ನೇರವಾಗಿ ಸ್ಥಳೀಯ ಸಂಸ್ಥೆಗಳು ರಸ್ತೆಗೆಂದೇ ಪಡೆಯುವಂತಿಲ್ಲ. ಅನಿವಾರ್ಯ ಸಂದರ್ಭ ಒದಗಿಬಂದಲ್ಲಿ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳು, ಸಹಾಯಕ ನಿರ್ದೇಶಕರಿಂದ ತಾಂತ್ರಿಕ ಅಭಿಪ್ರಾಯ ಪಡೆಯಬೇಕು. ಜಿಲ್ಲಾಧಿಕಾರಿಗಳು ಕಂದಾಯ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿದ ನಂತರ ಸ್ಥಳೀಯ ಸಂಸ್ಥೆಗಳು ಹಸ್ತಾಂತರಿಸಿಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ವ್ಯವಸಾಯ ಭೂಮಿಯನ್ನು ರಸ್ತೆಯೆಂದು ಭೂಮಾಲೀಕರಿಂದ ಪರಿತ್ಯಾಜನ ಪತ್ರದ ಮೂಲಕ ನೀಡಿದಲ್ಲಿ ಅಂತಹ ಜಾಗಗಳನ್ನು ಪಡೆಯಬಾರದು ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

ಇದರಿಂದ ಕಂದಾಯ ಬಡಾವಣೆಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಡಿಮೆ ಬೆಲೆಗೆ ಕಡಿಮೆ ಸೌಲಭ್ಯದಲ್ಲಿ ಬಡವರು ಮತ್ತು ಮಧ್ಯಮವರ್ಗದವರಿಗೆ ರೆವಿನ್ಯೂ ಸೈಟ್‌ಗಳು ಲಭ್ಯವಾಗುತ್ತಿದ್ದವು. ಇನ್ನು ಮುಂದೆ ಅಸಾಧ್ಯವಾಗಬಹುದಾಗಿದೆ.

ಚೇತರಿಕೆಗೆ ಮಾರಕ

ಕರೊನಾ ಲಾಕ್‌ಡೌನ್‌ನಿಂದ ರಿಯಲ್ ಎಸ್ಟೇಟ್ ಉದ್ಯಮ ಪಾತಾಳ ಮುಟ್ಟಿದೆ. ಇದರ ನಡುವೆಯೇ ರೆವಿನ್ಯೂ ಸೈಟ್‌ಗಳ ನೋಂದಣಿ ನಿಲ್ಲಿಸಲಾಗಿದೆ. ಜತೆಗೆ ಕಂದಾಯ ಲೇಔಟ್ ನಿರ್ಮಾಣ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಕೆಲಕಡೆ ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ  ಎಫ್​ಐಆರ್ ದಾಖಲಿಸಿ, ರೆವಿನ್ಯೂ ಲೇಔಟ್ ಅನ್ನು ಕಂದಾಯ ಇಲಾಖೆ ವಶಕ್ಕೆ ಪಡೆಯುತ್ತಿದೆ. ಇದೀಗ ಪರಿತ್ಯಾಜನ ಪತ್ರಕ್ಕೂ ತಡೆ ಬಂದಿರುವುದು ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆಗೆ ಹಿನ್ನಡೆಯಾಗಲಿದೆ.

ಗೊಂದಲ ಬಗೆಹರಿದಿಲ್ಲ

ಕಂದಾಯ ಇಲಾಖೆಯಲ್ಲಿ ಅಥವಾ ರೆವಿನ್ಯೂ ನಿವೇಶನಗಳು, ಅನುಮೋದಿತ ಸೈಟ್‌ಗಳು ಎಂದು ವಿಂಗಡಣೆ ಇಲ್ಲ. ಆದರೂ ರೆವಿನ್ಯೂ ಸೈಟ್‌ಗಳ ನೋಂದಣಿ ನಿಲ್ಲಿಸಲಾಗಿದೆ. ಜತೆಗೆ ಉಪನೋಂದಣಾಧಿಕಾರಿಗಳಿಗೆ ರೆವಿನ್ಯೂ ಸೈಟ್‌ಗಳ ನೋಂದಣಿಗೆ ತಡೆ ನೀಡಿರುವುದು ಕಾನೂನುಬದ್ಧವಲ್ಲ ಎನ್ನಲಾಗಿದೆ. ನೋಂದಣಿ ಕಾಯ್ದೆ 1908 ಮತ್ತು ಇದರಡಿ ರಚಿಸಲಾದ ಕರ್ನಾಟಕ ನೋಂದಣಿ ನಿಯಮಾವಳಿಗಳು 1965 ಅನ್ವಯ ದಸ್ತಾವೇಜುಗಳನ್ನು ಉಪನೋಂದಣಾಧಿಕಾರಿಗಳು ನೋಂದಾಯಿಸುತ್ತಾರೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net