ಸಿಡಿಲು ಮಲ್ಲಿಕಾರ್ಜುನಸ್ವಾಮಿ ಸನ್ನಿಧಿಯಲ್ಲಿ ದೀವಟಿಗೆ ಸೇವೆ

23BTP03
ಬೆಟ್ಟದಪುರದಲ್ಲಿ ಸಡಗರ ಸಂಭ್ರಮದಿಂದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀವಟಿಗೆ ಉತ್ಸವ ನಡೆಯಿತು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಬುಧವಾರ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ದೀವಟಿಗೆ(ಪಂಜಿನ) ಮೆರವಣಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಭಾಗದಲ್ಲಿ ತನ್ನದೇ ಆದ, ವೈಶಿಷ್ಟೃತೆಯನ್ನು ಹೊಂದಿರುವ ಉತ್ಸವವು ಲಕ್ಷಾಂತರ ಭಕ್ತರನ್ನು ಒಂದು ಕಡೆ ಸೇರಿಸುವಂತಹ ವಿಭಿನ್ನ ಹಬ್ಬವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಎಂದಿನಂತೆ ಸಡಗರ ಮನೆ ಮಾಡಿತ್ತು.

ಮಂಗಳವಾರ ರಾತ್ರಿ ಗ್ರಾಮದ ಹೃದಯ ಭಾಗದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿನ ಬೆಳ್ಳಿಬಸಪ್ಪ, ಗಣಪತಿ ಮತ್ತು ಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯದೊಂದಿಗೆ ಬೆಟ್ಟದ ಮೇಲಿನ ದೇಗುಲಕ್ಕೆ ತರಲಾಯಿತು. ಮರುದಿನ ಬಲಿಪಾಡ್ಯಮಿಯಂದು ಬೆಳಗ್ಗೆ ದೇಗುಲದಲ್ಲಿ ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಪ್ರತಿಬಾರಿಯಂತೆ ಈ ಬಾರಿಯೂ ಗ್ರಾಮದ ಉಪ್ಪಾರ ಸಮುದಾಯದವರು ಅಲಂಕಾರಗೊಂಡ ಉತ್ಸವ ಮೂರ್ತಿಗಳನ್ನು ಹೊತ್ತು ಬೆಟ್ಟದ ಮೇಲಿನಿಂದ ಪಂಚಿನ ಮೆರವಣಿಗೆ ಆರಂಭಿಸಿದರು.

ಸುತ್ತಮುತ್ತಲ ಗ್ರಾಮಗಳ ಭಕ್ತರು ತಮ್ಮ ಮನೆಯಲ್ಲಿಯೇ ಸಿದ್ಧಪಡಿಸಿ ತಂದ ಪಂಜಿನೊಂದಿಗೆ(ದೀವಟಿಗೆ) ಬೆಟ್ಟದಪುರ, ಬೆಟ್ಟದತುಂಗ, ಮೇಗಳಕೊಪ್ಪಲು, ಬಿಟಿಎಂ ಕೊಪ್ಪಲು, ಕುಡುಕೂರು, ಕುಡುಕೂರು ಕೊಪ್ಪಲು ಸೇರಿದಂತೆ ಈ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ರಾತ್ರಿಯೀಡಿ ಮೆರವಣಿಗೆ ಮಾಡಿ ಬಳಿಕ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಬಂದರು. ಈ ವೇಳೆ ಬೆಟ್ಟದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿ ಮನೆ ಹಾಗೂ ತಮ್ಮ ಜಮೀನಿನ ಮುಂದೆ ಹಸಿರು ಚಪ್ಪರವನ್ನು ಕಟ್ಟಿ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಚಪ್ಪರ ಹಾಗೂ ದೇಗುಲಗಳ ಪೂಜೆ ನಡೆಯುವ ಸಂದರ್ಭದಲ್ಲಿ ಪಂಜಿನ ದೀವಟಿಗೆ ಹಿಡಿದ ಭಕ್ತರು ಜಾನಪದ ಹಾಡುಗಳನ್ನು ಹಾಡುವ ಮೂಲಕ ದೇವರನ್ನು ಆರಾಧಿಸಿದರು. ಅರ್ಚಕರಾದ ಸತೀಶ್ ಕಶ್ಯಪ, ಕೃಷ್ಣಪ್ರಸಾದ್ ನೇತೃತ್ವದಲ್ಲಿ ದೇಗುಲಗಳಲ್ಲಿ ಪೂಜೆಗಳು ನಡೆದವು.

ಮಳೆಯಲ್ಲಿ ಬೆಳಕಿನ ದೈವದ ದರ್ಶನ: ಕಳೆದ ವಾರದಿಂದ ಈ ಪ್ರದೇಶದಲ್ಲಿ ಪ್ರತಿನಿತ್ಯ ಮೋಡ ಕವಿದ ವಾತಾವರಣ ಇರುವುದರ ಜತೆಗೆ ಸಂಜೆ ಸಂದರ್ಭದಲ್ಲಿ ಮಳೆಯ ಆಗಮನವಾಗುತ್ತಿತ್ತು. ಆದರೆ, ಬಲಿಪಾಡ್ಯಮಿ ಹಬ್ಬದ ದಿನ ಮುಂಜಾನೆಯಿಂದಲ್ಲೇ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬೆಟ್ಟದಪುರದಿಂದ ಸಮೀಪದ ಬೆಟ್ಟದತುಂಗ ಗ್ರಾಮಕ್ಕೆ ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೀವಟಿಗೆ ಉತ್ಸವ ಸಾಗುವಷ್ಟರಲ್ಲಿ ಜಿಟಿಜಿಟಿ ಮಳೆ ಆರಂಭವಾಯಿತು. ಮಳೆಯ ನಡುವೆಯೂ ಸ್ವಾಮಿಯ ಪಂಜಿನ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮಳೆಯಲ್ಲಿ ಬೆಳಕಿನ ದೈವ ದರ್ಶನ ಸ್ವರೂಪದಂತೆ ಹಬ್ಬ ಕಳೆಗಟ್ಟಿತ್ತು.

ಜಾತ್ರೆಯ ವೈಭವ : ದೀಪಾವಳಿ ಹಬ್ಬದ ಸಂದರ್ಭ ಈ ಭಾಗದಲ್ಲಿ ನಡೆಯುವ ಉತ್ಸವ ಹಿನ್ನೆಲೆಯಲ್ಲಿ ಬೆಟ್ಟದಪುರ, ಬೆಟ್ಟದತುಂಗ, ಕುಡುಕೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಜಾತ್ರೆ ರೀತಿಯಲ್ಲಿ ಹಬ್ಬವು ವಿಜೃಂಭಿಸಿತ್ತು. ಜಾತ್ರೆಯಲ್ಲಿ ಮಕ್ಕಳ ಆಟಿಕೆ ಸಾಮಾನುಗಳು, ಗೃಹೋಪಯೋಗಿ ವಸ್ತುಗಳು, ತಿಂಡಿ ತಿನಿಸಿಗಳು ಗಮನ ಸೆಳೆದವು.

-----------

ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆ ನಡೆಯಿತು. ದೀಪಾವಳಿ ದೀವಟಿಗೆ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಭಾನುವಾರದಿಂದಲ್ಲೂ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಅದರಲ್ಲೂ ವಿಶೇಷವಾಗಿ ಬುಧವಾರ ಅಧಿಕ ಸಂಖ್ಯೆಯಲ್ಲಿ ಭಕ್ತರು, ಯುವಕ-ಯುವತಿಯರು ಬೆಟ್ಟ ಹತ್ತಿ ದೇವರ ದರ್ಶನ ಪಡೆದರು. ಮೆಟ್ಟಿಲುಗಳಲ್ಲಿ ನೂಕುನುಗ್ಗಲು ಉಂಟಾಯಿತು. ಸುಮಾರು 3108 ಮೆಟ್ಟಿಲು ಹೊಂದಿರುವ ಬೆಟ್ಟಕ್ಕೆ ಆಗಮಿಸುವಂಥವರಿಗೆ ದಾಹ ನೀಗಿಸಲು ನೀರಿನ ಬಾಟಲ್, ಮಜ್ಜಿಗೆ, ಪಾನೀಯ ಪುಟ್ಟ ಪುಟ್ಟ ಅಂಗಡಿಗಳು ವ್ಯಾಪಾರ-ವಹಿವಾಟು ನಡೆಸಿದವು. ಸಾಕಷ್ಟು ಜನರು ಬೆಟ್ಟದ ಮೇಲೆ ತಮ್ಮ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಣಸೂರು ವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ದೀಪಕ್, ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‌ಐ ಅಜಯ್ ಕುಮಾರ್, ಬೈಲಕುಪ್ಪೆ ಠಾಣೆಯ ಪಿಎಸ್‌ಐ ರವಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಆರೋಗ್ಯ ಶಿಬಿರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net