ಕನ್ನಡದಲ್ಲೇ ಇಎಸ್​ಐ ಪರೀಕ್ಷೆ, ವಿಜಯವಾಣಿ ಅಭಿಯಾನಕ್ಕೆ ದಿಗ್ವಿಜಯ: ತಿದ್ದುಪಡಿ ಅಧಿಸೂಚನೆ ಹೊರಡಿಸಿದ ಕಾರ್ವಿುಕರ ರಾಜ್ಯ ವಿಮಾ ನಿಗಮ

Front
ಇಎಸ್​ಐಸಿ ಪರೀಕ್ಷೆ ಕುರಿತು ವಿಜಯವಾಣಿ ಪ್ರಕಟಿಸಿದ್ದ ಫಾಲೋಅಪ್ ವರದಿ.
Published on

ಬೆಂಗಳೂರು: ಕಾರ್ವಿುಕರ ರಾಜ್ಯ ವಿಮಾ ನಿಗಮದ (ಇಎಸ್​ಐಸಿ) ಕೆಳಹಂತದ ಹುದ್ದೆಗಳಿಗೆ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶವಾಗುವಂತೆ ನಿಗಮವು ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ವಿಜಯವಾಣಿ ಅಭಿಯಾನಕ್ಕೆ ದಿಗ್ವಿಜಯ ಸಂದಂತಾಗಿದೆ. ಇಎಸ್​ಐಸಿ ನೇಮಕಾತಿಗೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಂತಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯಿಸಿ ವಿಜಯವಾಣಿ ವರದಿಗಳನ್ನು ಪ್ರಕಟಿಸಿತ್ತು. ಕೇಂದ್ರದ ಕ್ರಮಕ್ಕೆ ರಾಜ್ಯಾದ್ಯಂತ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿಯೇ ಕಾರ್ಯ ನಿರ್ವಹಿಸಬೇಕಾದ ಹಾಗೂ ಕೆಳಹಂತದ ಹುದ್ದೆಗಳಾದ ಅಪ್ಪರ್ ಡಿವಿಷನ್ ಕ್ಲರ್ಕ್, ಸ್ಟೆನೋಗ್ರಾಫರ್ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳಿಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲೂ ಅಟೆಂಡರ್ ಅಥವಾ ಆಫೀಸ್ ಬಾಯ್ ಹುದ್ದೆಗೆ ಇಂಗ್ಲಿಷ್​ನಲ್ಲಿ ಪರೀಕ್ಷೆ ಬರೆಯಬೇಕೆಂಬ ನಿಯಮ ವಿಧಿಸಲಾಗಿತ್ತು. ಇದೀಗ ಹೊರಡಿಸಲಾಗಿರುವ ತಿದ್ದುಪಡಿ ಅಧಿಸೂಚನೆಯಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದೆ. ಆದರೆ, ಅಪ್ಪರ್ ಡಿವಿಷನ್ ಕ್ಲರ್ಕ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಕೇಂದ್ರ ಸರ್ಕಾರದ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ವಿುಕರ ರಾಜ್ಯ ವಿಮಾ ನಿಗಮ (ಇಎಸ್​ಐಸಿ) ದೇಶಾದ್ಯಂತ 3,865 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಕರ್ನಾಟಕಕ್ಕೆ 282 ಹುದ್ದೆಗಳು ಲಭ್ಯವಿದೆ. ಇದರಲ್ಲಿ ಎಂಟಿಎಸ್ ಹುದ್ದೆಗಳು 65, ಸ್ಟೆನೋಗ್ರಾಫರ್-18 ಹಾಗೂ ಅಪ್ಪರ್ ಡಿವಿಷನಲ್ ಕ್ಲರ್ಕ್ ಹುದ್ದೆಗಳ ಸಂಖ್ಯೆ 199 ಆಗಿದೆ.

15ರಿಂದ ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಜ.15ಕ್ಕೆ ಆರಂಭವಾಗಲಿದೆ.

ಹೇಗಿರುತ್ತೆ ಪರೀಕ್ಷೆ?: ಎಲ್ಲ ಹುದ್ದೆಗಳಿಗೂ ಎರಡು ಹಂತದ ಪರೀಕ್ಷೆ ಇದೆ. ಮೊದಲ ಹಂತ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಪಾಸಾದರೆ ಮುಖ್ಯಪರೀಕ್ಷೆ ಬರೆಯಬಹುದು. ಪ್ರಿಲಿಮ್ಸ್​ನಲ್ಲಿ ಎಂಟಿಎಸ್ ಹುದ್ದೆಗೆ ಒಟ್ಟು 200 ಅಂಕಗಳ 100 ಪ್ರಶ್ನೆಗಳಿಗೆ ಒಂದು ತಾಸಿನಲ್ಲಿ ಉತ್ತರಿಸಬೇಕು. ಜನರಲ್ ಇಂಟಲಿಜೆನ್ಸ್ ಆಂಡ್ ರೀಸನಿಂಗ್, ಜನರಲ್ ಅವೇರ್​ನೆಸ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ವಿಷಯಗಳಿವೆ. ಇಂಗ್ಲಿಷ್ ಕಾಂಪ್ರೆಹೆನ್ಷನ್ ಪರೀಕ್ಷೆಯನ್ನು ಇಂಗ್ಲಿಷ್​ನಲ್ಲಿಯೇ ಬರೆಯಬೇಕು. ನಂತರ ಮುಖ್ಯ ಪರೀಕ್ಷೆಯಲ್ಲಿ 200 ಅಂಕದ 200 ಪ್ರಶ್ನೆಗಳಿಗೆ 2 ತಾಸಿನಲ್ಲಿ ಉತ್ತರಿಸಬೇಕು. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ನೇಮಕಾತಿಗೆ ಪರಿಗಣಿಸಲಾಗುತ್ತದೆ. ತಪು್ಪ ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುತ್ತದೆ. ಸ್ಟೆನೋಗ್ರಾಫರ್ ಹುದ್ದೆಗಳಿಗೆ ಕೌಶಲ ಪರೀಕ್ಷೆ ಇರಲಿದೆ.

ಖಾಲಿ ಹುದ್ದೆಗಳ ಮಾಹಿತಿ
  • ದೇಶಾದ್ಯಂತ 3,865 ಹುದ್ದೆ ಭರ್ತಿ
  • ಕರ್ನಾಟಕದಲ್ಲಿ 282 ಹುದ್ದೆಗಳು
  • ಎಂಟಿಎಸ್ ಹುದ್ದೆ 65
  • ಸ್ಟೆನೋಗ್ರಾಫರ್ 18
  • ಅಪ್ಪರ್ ಡಿವಿಷನಲ್ ಕ್ಲರ್ಕ್ 199

ಕಾರ್ವಿುಕ ಸಚಿವರ ಬದ್ಧತೆ: ಆಫೀಸ್ ಬಾಯ್ ಕೆಲಸಕ್ಕೂ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ಎದುರಿಸಬೇಕಾಗಿರುವ ಕುರಿತು ವಿಜಯವಾಣಿ ಪ್ರಕಟಿಸುತ್ತಿದ್ದಂತೆಯೇ ಕಾರ್ವಿುಕ ಸಚಿವ ಶಿವರಾಮ್ ಹೆಬ್ಬಾರ್ ಎಚ್ಚೆತ್ತು, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮಾತುಕತೆ ನಡೆಸಿ ನಿಯಮದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ತಿದ್ದುಪಡಿ ಅಧಿಸೂಚನೆಯಲ್ಲೇನಿದೆ?: 2021ರ ಡಿಸೆಂಬರ್ 27ರಂದು ಹೊರಡಿಸಲಾಗಿದ್ದ ಅಪ್ಪರ್ ಡಿವಿಷನ್ ಕ್ಲರ್ಕ್, ಸ್ಟೆನೋಗ್ರಾಫರ್ ಹಾಗೂ ಎಂಟಿಎಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಎಂಟಿಎಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಭಾಷಾ ಮಾಧ್ಯಮದಲ್ಲಿ ಬದಲಾವಣೆ ಮಾಡಿ ಆಯಾ ವಲಯಗಳಲ್ಲಿ ಹಿಂದಿ ಜತೆಗೆ ಇತರ ಪ್ರಾದೇಶಿಕ ಭಾಷೆಗಳಿಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ. ಕರ್ನಾಟಕ ವಲಯದಲ್ಲಿ ಕನ್ನಡ, ಕೊಂಕಣಿ, ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ಬರೆಯಬಹುದು ಎಂದು ತಿಳಿಸಿದೆ. ಅದೇ ರೀತಿ ಆಯಾ ರಾಜ್ಯದವರು ಅವರವರ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಆದರೆ, ಇಂಗ್ಲಿಷ್ ಭಾಷಾ ಗ್ರಹಿಕೆ (ಕಾಂಪ್ರೆಹೆನ್ಷನ್) ಪರೀಕ್ಷೆಯನ್ನು ಇಂಗ್ಲಿಷ್​ನಲ್ಲಿಯೇ ಬರೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net