ಬಡ ರಾಷ್ಟ್ರಗಳಲ್ಲಿ ಕ್ಯಾನ್ಸರ್ ಹೆಚ್ಚಳ

WHO
Published on

ಜಿನೀವಾ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರೈಕೆಯಲ್ಲಿ ಹೂಡಿಕೆ ಕೊರತೆಯಿಂದಾಗಿ 2040ರ ವೇಳೆಗೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಶೇಕಡಾ 81ರಷ್ಟು ಏರಿಕೆಯಾಗಲಿವೆ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ ) ಎಚ್ಚರಿಕೆ ನೀಡಿದೆ. ಈ ದೇಶಗಳು ತಮ್ಮ ಸೀಮಿತ

ಸಂಪನ್ಮೂಲಗಳನ್ನು ಸಾಂಕ್ರಾಮಿಕ ರೋಗಗಳು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ಬದಲು ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸಲು ಕೇಂದ್ರೀಕರಿಸಿವೆ. ಹೀಗಾಗಿ ಅಲ್ಲಿ ಹೆಚ್ಚು ಜನರು ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದಾರೆ. ಶ್ರೀಮಂತ ಮತ್ತು ಬಡ ದೇಶಗಳಲ್ಲಿನ ಕ್ಯಾನ್ಸರ್ ಸೇವೆಗಳ ನಡುವಿನ ಅಸಮಾನತೆ ನಿಭಾಯಿಸಲು ನಮ್ಮೆಲ್ಲರಿಗೆ ಎಚ್ಚರಿಕೆಯಗಂಟೆ ಎಂದು ಡಬ್ಲ್ಯೂಎಚ್​ಒ ಸಹಾಯಕ ಮಹಾನಿರ್ದೇಶಕ ರೆನ್ ಮಿಂಗ್ಹುಯಿ ವರದಿಯಲ್ಲಿ ತಿಳಿಸಿದ್ದಾರೆ.

ಜನರಿಗೆ ಪ್ರಾಥಮಿಕ ಆರೈಕೆ ಮತ್ತು ಚಿಕಿತ್ಸಾ ವ್ಯವಸ್ಥೆಗಳಿದ್ದರೆ ಕ್ಯಾನ್ಸರ್​ನ್ನು ಮೊದಲೇ ಕಂಡು ಹಿಡಿದು, ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಮುಂದಿನ ದಶಕದಲ್ಲಿ 25 ಮಿಲಿಯನ್ ಡಾಲರ್ ಹೂಡಿಕೆಯಿಂದ ಸುಮಾರು 7 ಲಕ್ಷ ಜೀವಗಳನ್ನು ಕ್ಯಾನ್ಸರ್​ನಿಂದ ಉಳಿಸಬಹುದಾಗಿದೆ ಎಂದು ಮಿಂಗ್ಹುಯಿ ಅಭಿಪ್ರಾಯಪಟ್ಟಿದ್ದಾರೆ.

2040ರ ವೇಳೆಗೆ ವಿಶ್ವದ ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳು ಶೇಕಡಾ 60 ಏರಿಕೆಯಾಗುವ ಸಾಧ್ಯತೆ ಇದೆ ಮತ್ತು ಶೇಕಡಾ 25 ಪ್ರತಿಶತದಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಪ್ರಮುಖ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಆದಾಯ ಹೊಂದಿರುವ ದೇಶಗಳಲ್ಲಿ ಕ್ಯಾನ್ಸರ್​ಗೆ ಉತ್ತಮ ಚಿಕಿತ್ಸೆ ಲಭ್ಯವಿರುವ ಕಾರಣ 2000 ಇಸ್ವಿಯಿಂದ 2015ರ ನಡುವೆ ಮರಣ ಪ್ರಮಾಣದಲ್ಲಿ ಶೇಕಡಾ 20ರಷ್ಟು ಇಳಿಕೆಯಾಗಿದೆ. ಆದರೆ ಬಡ ದೇಶಗಳಲ್ಲಿ ಇದೇ ಅವಧಿಯಲ್ಲಿ ಕ್ಯಾನ್ಸರ್ ಇಳಿಕೆ ಪ್ರಮಾಣ ಕೇವಲ ಶೇಕಡಾ 5ರಷ್ಟಿದೆ. ಈ ಹಿಂದೆ ಕ್ಯಾನ್ಸರ್ ರೋಗವನ್ನು ಶ್ರೀಮಂತ ದೇಶಗಳ ಕಾಯಿಲೆ ಎಂದು ಪರಿಗಣಿಸಲಾಗಿದ್ದರೂ, ಇತ್ತೀಚೆಗೆ ಬಡದೇಶಗಳು ಈ ಮಹಾಮಾರಿಗೆ ಹೆಚ್ಚು ಬಲಿಯಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net