

ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಮಾತ್ರವಲ್ಲದೆ, ವಂಶವಾಹಿಯಿಂದಲೂ ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಪ್ರತಿವರ್ಷ ಶೇ. 2 (50 ಸಾವಿರ) ಮಂದಿಯಲ್ಲಿ ಕ್ಯಾನ್ಸರ್ ಕಾಯಿಲೆ ಪತ್ತೆಯಾಗುತ್ತಿದೆ. ಹಾಗಾಗಿ, ಮುನ್ನಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕ್ಯಾನ್ಸರ್ನಿಂದ ದೂರವಿರಬಹುದು ಎಂದು ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ, ಆಡಳಿತಾಧಿಕಾರಿ ಡಾ. ಬಿ.ಎಸ್.ಶ್ರೀನಾಥ್ ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ರೇಡಿಯೇಷನ್ ಅಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸಿದ್ದಣ್ಣ ಆರ್ ಪಲ್ಲದ್ ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.
ಆಹಾರ ಬೆಳೆಯುವ ಕ್ರಮದಲ್ಲೇ ದೋಷ (ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಬಳಕೆ) ಇರುವುದರಿಂದ ಕಟ್ಟುನಿಟ್ಟಿನ ಆಹಾರ ಸೇವನೆ ಕ್ರಮ ಹೊಂದಿದ್ದವರಲ್ಲೂ ಕ್ಯಾನ್ಸರ್ ಬರಬಹುದು. ಚಟುವಟಿಕೆ ರಹಿತ ಜೀವನಶೈಲಿ, ಜಂಕ್ ಫುಡ್, ಸಂಸ್ಕರಿಸಿದ ಆಹಾರ, ಕಲಬೆರಕೆ ಪದಾರ್ಥ ಬಳಕೆ, ಪರಿಸರ ಮಾಲಿನ್ಯ ಇತ್ಯಾದಿ ಕ್ಯಾನ್ಸರ್ಗೆ ಕಾರಣವಾದರೆ, ತಂಬಾಕು ಬಳಕೆಯಿಂದ ಶೇ. 40ರಷ್ಟು ಅಪಾಯ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತವಾಗಿ ಕ್ರಮ ವಹಿಸಬೇಕಾದ ಅಗತ್ಯ ಇದೆ ಎಂದು ತಜ್ಞರು ಪ್ರತಿಪಾದಿಸಿದರು.
ನಾಗರಿಕರಲ್ಲಿ ಅರಿವು ಅತ್ಯಗತ್ಯ: ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಇದೆ. ಕ್ಯಾನ್ಸರ್ ಮಾರಣಾಂತಿಕ, ವಾಸಿಯಾಗದ ಕಾಯಿಲೆ, ಸಿರಿವಂತರ ರೋಗ ಇತ್ಯಾದಿ ಮಾತುಗಳು ಜನಜನಿತ. ಆದರೆ, ತಂತ್ರಜ್ಞಾನ ಬೆಳೆದಂತೆ, ವಿಜ್ಞಾನ ಕ್ಷೇತ್ರದಲ್ಲಾಗಿರುವ ಆವಿಷ್ಕಾರ, ಸಂಶೋಧನೆಯಿಂದಾಗಿ ಕೆಲ ವಿಧದ ಕ್ಯಾನ್ಸರ್ ವಾಸಿ ಮಾಡಲು ಸಾಧ್ಯವಿದೆ. ಈ ವಿಚಾರದಲ್ಲಿ ಮಡಿವಂತಿಕೆ ಬಿಟ್ಟು ವೈದ್ಯರ ಬಳಿ ರೋಗ ತಪಾಸಣೆಗೆ ಒಳಗಾದಲ್ಲಿ ಅರ್ಬುದ ರೋಗದಿಂದ ದೂರ ಉಳಿಯಬಹುದು. ಈ ನಿಟ್ಟಿನಲ್ಲಿ ಸರ್ಕಾರ, ಸ್ವಯಂಸೇವಾ ಸಂಘಟನೆಗಳು ಹಾಗೂ ಖಾಸಗಿ ವೈದ್ಯ ಸಂಸ್ಥೆಗಳು ಜನಜಾಗೃತಿಯಲ್ಲಿ ತೊಡಗಿವೆ. ಈ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿ ಮಾಡಿದ್ದೇ ಆದಲ್ಲಿ ಕ್ಯಾನ್ಸರ್ ರೋಗವನ್ನು ಹತೋಟಿಯಲ್ಲಿಡಬಹುದಾಗಿದೆ.
ದೇಶೀ ಉಪಕರಣ ತಯಾರಿಕೆ ಅಗತ್ಯ: ಪ್ರಸ್ತುತ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತಿರುವ ಹೆಚ್ಚಿನ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇವುಗಳ ಮೇಲೆ ಸುಂಕ, ಜಿಎಸ್ಟಿ ಹಾಗೂ ಇತರ ಶುಲ್ಕ ಸೇರಿ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಜನರ ಆರೋಗ್ಯ ಕಾಳಜಿಯಿಂದ ಸರ್ಕಾರ ತೆರಿಗೆ ಕಡಿತ ಮಾಡಬೇಕು ಇಲ್ಲವೇ ಅಷ್ಟೂ ಉಪಕರಣಗಳನ್ನು ದೇಶಿಯವಾಗಿ ತಯಾರಿಸಿದರೆ ಅರ್ಧದಷ್ಟು ಹಣ ಉಳಿತಾಯವಾಗುತ್ತದೆ. ಈ ವಿಷಯದತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ ಎಂದು ಡಾ. ಬಿ.ಎಸ್.ಶ್ರೀನಾಥ್ ಸಲಹೆ ನೀಡಿದರು.
ಸಂಶೋಧನೆಯಿಂದ ಮನುಕುಲಕ್ಕೆ ಲಾಭ: ಕ್ಯಾನ್ಸರ್ ವಿರುದ್ಧದ ಹೋರಾಟ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಈ ರೋಗದ ವಿರುದ್ಧ ಸರ್ಕಾರ ಅಥವಾ ಒಂದು ಸಂಸ್ಥೆ ಕೆಲಸ ಮಾಡಲಾಗದು. ಬದಲಾಗಿ ಎಲ್ಲ ವಲಯಗಳೂ ಒಂದಾಗಿ ಸಂಘಟಿತ ರೂಪದಲ್ಲಿ ಕಾರ್ಯನಿರ್ವಹಿಸಿದರೆ ಉತ್ತಮ ಫಲಿತಾಂಶ ಸಿಗಲಿದೆ. ವರ್ಷಗಳ ಹಿಂದೆ ಚಿಕಿತ್ಸಾ ಕ್ರಮ ಅನುಸರಿಸಲು ಕ್ಲಿಷ್ಟ ವಿಧಾನಗಳಿದ್ದವು. ಸಂಶೋಧನೆಯ ಫಲವಾಗಿ ಕೆಲ ಔಷಧಗಳು ಉಪಶಮನ ನೀಡುತ್ತಿವೆ. ತಂತ್ರಜ್ಞಾನ ಕೂಡ ಕ್ಯಾನ್ಸರ್ ಚಿಕಿತ್ಸೆಗೆ ರಾಮಬಾಣವಾಗಿ ವರ್ತಿಸುತ್ತಿದೆ. ಮುಂದಿನ ಒಂದು ದಶಕದಲ್ಲಿ ಒಳ್ಳೆಯ ಔಷಧಗಳು ದೊರೆತು ಮನುಕುಲ ಅನುಭವಿಸುತ್ತಿರುವ ಅರ್ಬುದ ರೋಗವನ್ನು ನಿಯಂತ್ರಿಸುವ ಸಾಧ್ಯತೆ ಇದೆ ಎಂದು ಡಾ. ಬಿ.ಎಸ್.ಶ್ರೀನಾಥ್ ಆಶಾಭಾವ ವ್ಯಕ್ತಪಡಿಸಿದರು.
ಉದ್ಯಮ ಸ್ಥಾನಮಾನದಿಂದಾಗಿ ಸೇವೆ ಮಾಯ!: ಹಿಂದೆ ಆರೋಗ್ಯ ಕ್ಷೇತ್ರ ಸೇವಾ ವಲಯದಲ್ಲಿತ್ತು. ಹಾಗಾಗಿ, ಎಲ್ಲೆಡೆ ಸೇವೆ ರೂಪದಲ್ಲಿ ಚಿಕಿತ್ಸೆ ಸಿಗುತ್ತಿತ್ತು. ಈಗ ಹೆಲ್ತ್ಕೇರ್ ಉದ್ಯಮದ ಸ್ಥಾನಮಾನ ಪಡೆದ ಬಳಿಕ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಕಾರ್ಪೆರೇಟ್ ಮಾದರಿಯಲ್ಲೂ ರೂಪಾಂತರ ಆಗಿರುವುದರಿಂದ ತೆರಿಗೆ ಪಾವತಿ, ಶುಲ್ಕ ವೆಚ್ಚ ಏರುತ್ತಿದೆ. ಜತೆಗೆ ಆರೋಗ್ಯ ಕ್ಷೇತ್ರ ‘ಸರ್ವೀಸ್’ ಬದಲು ‘ಪ್ರಾಫಿಟ್’ ಮಾಡುವ ವಾಣಿಜ್ಯ ಮುಖ ಇಣುಕಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಸಿಗದಂತಾಗಿದೆ. ಈ ನೀತಿ ಬದಲಾಗಬೇಕಿದ್ದು, ಸರ್ಕಾರ ಕೂಡ ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕಿದೆ ಎಂಬ ವಾದ ಮುಂದಿಡಲಾಯಿತು.
ಎಚ್ಪಿವಿ ಲಸಿಕೆ: ಇತ್ತೀಚಿನ ವರ್ಷಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಯಿಲೆ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಎಚ್ಪಿವಿ ಲಸಿಕೆ ಮತ್ತು ಶುಚಿತ್ವ. ಹೆಣ್ಣುಮಕ್ಕಳಿಗೆ ಹದಿಹರೆಯದ ವಯಸ್ಸಿನಲ್ಲಿ ಈ ಲಸಿಕೆ ನೀಡುವುದರಿಂದ ಗರ್ಭಕಂಠದ ಕ್ಯಾನ್ಸರ್ ಬಾರದಂತೆ ತಡೆಯಬಹುದಾಗಿದೆ. ಆದರೆ, ಇದರ ದರ ಹೆಚ್ಚಿರುವುದರಿಂದ ಹಾಗೂ ಅರಿವಿನ ಕೊರತೆಯಿಂದ ಬಹಳಷ್ಟು ಮಂದಿ ಸೌಲಭ್ಯ ಪಡೆಯುತ್ತಿಲ್ಲ. ಈ ಬಗ್ಗೆ ಶಾಲಾ ಮತ್ತು ಕಾಲೇಜುಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ಲಸಿಕೆ ಪಡೆಯುವ ಮೂಲಕ ಗರ್ಭಕಂಠದ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದಾಗಿದೆ. ಇದಲ್ಲದೆ ಹೆಪಟೈಟಿಸ್ ಬಿ ಲಸಿಕೆ ಲಭ್ಯವಿದ್ದು, ಇದನ್ನು ಯಾವುದೇ ವಯೋಮಾನದವರು ಪಡೆಯಬಹುದಾಗಿದ್ದು, ಇದರಿಂದ ಲಿವರ್ ಕ್ಯಾನ್ಸರ್ ತಡೆಗಟ್ಟಬಹುದು.
ಪ್ರಾದೇಶಿಕ ಕೇಂದ್ರದಿಂದ ಅನುಕೂಲ: ಸರ್ಕಾರ ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಡಿಯಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಇದರಿಂದ ರೋಗಿಗಳು ಸ್ಥಳೀಯವಾಗಿ ಚಿಕಿತ್ಸೆ ಪಡೆಯಲು ಅನುಕೂಲವಾಗಿದೆ. ಬೆಂಗಳೂರಿನಲ್ಲಿ 1000 ಹಾಸಿಗೆಗಳ ಸೌಲಭ್ಯದೊಂದಿಗೆ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ, ವೈದ್ಯಕೀಯ ಉಪಕರಣ ಹಾಗೂ ನುರಿತ ವೈದ್ಯರ ತಂಡ ಇಲ್ಲಿದೆ. ಈಗಾಗಲೇ ಕಲಬುರಗಿಯಲ್ಲಿ 80 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಇದೆ. ತುಮಕೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೈಸೂರು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಹೊಸದಾಗಿ ಶಾಖೆ ಆರಂಭಿಸಲು ಸಿದ್ಧತೆ ನಡೆದಿದೆ. ಇವುಗಳು ಆರಂಭವಾದಲ್ಲಿ ದೂರದ ಊರುಗಳಿಂದ ರಾಜಧಾನಿಗೆ ಬಂದು ಹೋಗುವ ಸಮಸ್ಯೆ ತಪ್ಪಲಿದೆ.
ಆಯುರ್ವೇದ ಚಿಕಿತ್ಸೆ: ಕ್ಯಾನ್ಸರ್ ಕಾಯಿಲೆಗೆ ಸೂಕ್ತ ಔಷಧಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಸಂಶೋಧನೆಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಅಲೋಪತಿ ಚಿಕಿತ್ಸೆ ಜತೆಗೆ ಆಯುರ್ವೆದ ಹಾಗೂ ಯೋಗ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಿಮೋಥೆರಪಿಯಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ತಡೆಯುವಲ್ಲಿ ಆಯುರ್ವೆದ ಹಾಗೂ ಯೋಗ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಅಲೋಪತಿಯ ಜೊತೆಗೆ ಯೋಗ ಚಿಕಿತ್ಸೆ ಪಡೆದ ಸ್ತನ ಕ್ಯಾನ್ಸರ್ ರೋಗಿಗಳು ಬೇಗನೆ ಗುಣ ಹೊಂದಿರುವುದು ಪ್ರಯೋಗಾತ್ಮಕವಾಗಿ ಸಾಬೀತಾಗಿದೆ. ಹಾಗಾಗಿ ಶಂಕರ ಕ್ಯಾನ್ಸರ್ ಫೌಂಡೇಷನ್ನಲ್ಲಿ ರೋಗಿಗಳ ಆಸಕ್ತಿ ಮೇರೆಗೆ ಅಲೋಪತಿ, ಯೋಗ ಹಾಗೂ ಆಯುರ್ವೆದ ಈ ಮೂರನ್ನೂ ಒಗ್ಗೂಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿ.ಎಸ್. ಶ್ರೀನಾಥ್ ವಿವರಿಸಿದರು. ಅಲೋಪತಿ ಔಷಧ ಹಲವು ಪ್ರಯೋಗಗಳೊಂದಿಗೆ ಸಾಬೀತಾಗಿರುತ್ತದೆ. ಆದರೆ, ಇತರೆ ಔಷಧಗಳು ವೈಜ್ಞಾನಿಕವಾಗಿ ಸಾಬೀತಾಗಿರುವುದಿಲ್ಲ. ಹಾಗಾಗಿ ಕೆಲವರು ಇತರ ಔಷಧ ಪಡೆದು ಸಮಸ್ಯೆ ಹೆಚ್ಚು ಮಾಡಿಕೊಳ್ಳುತ್ತಾರೆ. ಕೆಲವರು ನಾಟಿ ಔಷಧ ಮೊರೆ ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಂಡು ಕಾಯಿಲೆ ಇನ್ನಷ್ಟು ಗಂಭೀರ ಸ್ವರೂಪಕ್ಕೆ ಹೋದಾಗ ಮರಳಿ ಚಿಕಿತ್ಸೆಗೆ ಬರುತ್ತಾರೆ. ಆಗ ಚಿಕಿತ್ಸೆ ನೀಡಿದರೂ ಪ್ರಯೋಜನವಾಗುವುದಿಲ್ಲ ಎಂದು ಡಾ. ಸಿದ್ದಣ್ಣ ಆರ್. ಪಲ್ಲದ್ ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಯೋಜನೆಗಳಿಂದ ನೆರವು: ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಹಾಗೂ ವಾಜಪೇಯ ಆರೋಗ್ಯ ಸೇರಿ ಸರ್ಕಾರಿ ಆರೋಗ್ಯ ಯೋಜನೆಗಳಿಂದಾಗಿ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯುತ್ತಿದ್ದು, ರೋಗಿಗಳು ನಿಯಮಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಇತ್ತೀಚಿಗೆ ಕ್ಯಾನ್ಸರ್ನಿಂದ ಗುಣ ಹೊಂದುವವರ ಸಂಖ್ಯೆ ಏರುಗತಿ ಕಂಡಿದೆ. ಜತೆಗೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ 2 ಕೋಟಿ ರೂ. ವೆಚ್ಚದ ಸುಸಜ್ಜಿತ ಸಂಚಾರಿ ಪ್ರಯೋಗಾಲಯ ಹೊಂದಿದ್ದು, ಪ್ರಧಾನ ಕೇಂದ್ರ ಹಾಗೂ ಪ್ರಾದೇಶಿಕ ಕೇಂದ್ರಗಳಿಂದ ವರ್ಷದಲ್ಲಿ 120-150 ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ ವರ್ಷದಲ್ಲಿ 150-200 ಮಂದಿಗೆ ಆರಂಭದಲ್ಲೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಕಾರ್ಯ ಆಗುತ್ತಿದೆ ಎಂದು ಡಾ. ಸಿದ್ದಣ್ಣ ಆರ್. ಪಲ್ಲದ್ ತಿಳಿಸಿದರು. ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿ ವರ್ಷ 20 ಸಾವಿರ ಹೊರ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಇವರಲ್ಲಿ 12-13 ಸಾವಿರ ಮಂದಿಯಲ್ಲಿ ರೋಗ ಪತ್ತೆಯಾಗುತ್ತದೆ. ವಾರ್ಷಿಕ 2-2.5 ಲಕ್ಷ ಮಂದಿ ಅನುಸರಣಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೆಲ್ಲಾ ರೋಗಿಗಳಿಗೆ ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಇದರಿಂದಾಗಿ ಅರ್ಧದಲ್ಲೇ ಚಿಕಿತ್ಸೆ ಕೂಡ ನಿಲ್ಲಿಸುತ್ತಿದ್ದರು. ಆದರೀಗ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ ಇರುವುದರಿಂದ ಶೇ. 60ಕ್ಕೂ ಹೆಚ್ಚು ರೋಗಿಗಳು ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕರು ಗುಣ ಹೊಂದುತ್ತಿದ್ದಾರೆ. ಸಂಸ್ಥೆಯಿಂದ ರೋಗಿಗಳ ಆರೋಗ್ಯ ಕುರಿತು ನಿಯಮಿತವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.