ಕ್ಯಾನ್ಸರ್ ಪೀಡಿತ ರೈತನನ್ನು ಬ್ಯಾಂಕ್ ಎದುರು ಅಡ್ಡ ಮಲಗಿಸಿ ಪ್ರತಿಭಟನೆ

20-RNR-09
Published on

ರಾಣೆಬೆನ್ನೂರ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೈತನ ಸಾಲವನ್ನು ಒನ್ ಟೈಮ್ ಸೆಟ್ಲಮೆಂಟ್ (ಓಟಿಎಸ್) ಮೂಲಕ ತುಂಬಿಸಿಕೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಮಾಕನೂರ ಗ್ರಾಮದ ಬ್ಯಾಂಕ್‌ವೊಂದರ ಎದುರು ಸೋಮವಾರ ರೈತನನ್ನು ಅಡ್ಡ ಮಲಗಿಸಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಗ್ರಾಮದ ರೈತ ಸುರೇಶ ಪಾಟೀಲ ಎಂಬುವರು 2013ರಲ್ಲಿ 6.50 ಲಕ್ಷ ರೂ. ಸಾಲ ಪಡೆದಿದ್ದರು. ಅದು ಈಗ ಬಡ್ಡಿ ಸೇರಿ 15.95 ಲಕ್ಷ ರೂ. ಆಗಿದೆ. ಬ್ಯಾಂಕ್‌ನವರು ರೈತನ ಸಾಲವನ್ನು ಓಟಿಎಸ್ ಮೂಲಕ ತುಂಬಿಕೊಳ್ಳಲು ತಯಾರಿಲ್ಲ.
ರೈತ ನೋಡಿದರೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ನಾನು ಸಾಲದಿಂದ ಋಣಮುಕ್ತ ಆಗಬೇಕು ಎನ್ನುತ್ತಿದ್ದಾನೆ. ಆದರೆ, ಬ್ಯಾಂಕ್‌ನವರು ಓಟಿಎಸ್ ಮೂಲಕ ಸಾಲ ತುಂಬಿಸಿಕೊಳ್ಳುತ್ತಿಲ್ಲ. ಇನ್ನೇರಡು ದಿನ ಬ್ಯಾಂಕ್‌ನವರಿಗೆ ಅವಕಾಶ ಕೊಡುತ್ತೇವೆ. ಓಟಿಎಸ್ ಮೂಲಕ ಸಾಲ ತುಂಬಿಸಿಕೊಳ್ಳದಿದ್ದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ರವೀಂದ್ರಗೌಡ ಪಾಟೀಲ, ಹರಿಹರಗೌಡ ಪಾಟೀಲ, ಪರ್ವತಗೌಡ ಕುಸಗೂರು, ಕೆ.ಬಿ. ಬಣಕಾರ, ರಾಜು ಕೋರೆರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net