ಅನಗತ್ಯ ಹುದ್ದೆ ಕಡಿತ ಶುರು: ಸಹಕಾರ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಹುದ್ದೆಗಳ ರದ್ದು

Vidhana Soudha
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಇಲಾಖೆಗಳ ವಿಲೀನ ಹಾಗೂ ಅನಗತ್ಯ ಹುದ್ದೆಗಳನ್ನು ರದ್ದು ಮಾಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಆಡಳಿತ ಸುಧಾರಣೆ ಭಾಗವಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಶಿಫಾರಸು ಹಾಗೂ ಹಿಂದಿನ ವೇತನ ಆಯೋಗ ತನ್ನ ಎರಡನೇ ವರದಿಯಲ್ಲಿ ಕಾರ್ಯಾಚರಣೆ ವೃಂದವನ್ನು ಬಲಪಡಿಸಬೇಕು ಹಾಗೂ ಸಹಾಯಕ ಸಿಬ್ಬಂದಿ ವೃಂದವನ್ನು ಕಡಿಮೆ ಮಾಡಬೇಕೆಂಬ ವರದಿ ಜಾರಿಗೆ ಸರ್ಕಾರ ಹೆಜ್ಜೆಯನ್ನಿಟ್ಟಿದೆ.

ಯಾವ ಹುದ್ದೆ ರದ್ದು?: ಈಗ ಸಹಕಾರ ಇಲಾಖೆಯಲ್ಲಿ ಹುದ್ದೆಗಳ ರದ್ದತಿಗೆ ಆದೇಶವಾಗಿದೆ. 32 ಶೀಘ್ರ ಲಿಪಿಗಾರರು, 30 ಡೇಟಾ ಎಂಟ್ರಿ ಆಪರೇಟರ್​ಗಳು, 50 ದ್ವಿತೀಯ ದರ್ಜೆ ಸಹಾಯಕರು ಹಾಗೂ 200 ಡಿ ಗ್ರೂಪ್ ನೌಕರರ ಹುದ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಸಮ್ಮತಿಸಿದೆ. ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳ ರದ್ದತಿಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ. ಸಹಕಾರ ಇಲಾಖೆಯಲ್ಲಿ ಮೊದಲಿಗೆ ಹುದ್ದೆಗಳ ಕಡಿತ ಮಾಡಲಾಗಿದೆ. ಮುಂದೆ ಉಳಿದ ಇಲಾಖೆಗಳಲ್ಲಿಯೂ ಇದೇ ರೀತಿಯಲ್ಲಿ ಅನಗತ್ಯ ಹುದ್ದೆಗಳನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಇಲಾಖೆಗಳ ವಿಲೀನ: ಇಲಾಖೆಗಳನ್ನು ವಿಲೀನ ಮಾಡುವುದು ಅಥವಾ ರದ್ದು ಮಾಡುವ ಬಗ್ಗೆಯೂ ಸರ್ಕಾರ ಕಾರ್ಯೋನ್ಮುಖವಾಗಿದೆ. ಸಾರ್ವಜನಿಕ ಉದ್ದಿಮೆಗಳ ಇಲಾಖೆ ಹಾಗೂ ಡಿಪಿಎಆರ್​ನ ಜನಸ್ಪಂದನಾ ಕೋಶವನ್ನು ರದ್ದು ಮಾಡಲಾಗಿದೆ. ಜನಸ್ಪಂದನ ಕೋಶದಲ್ಲಿರುವ 12 ಹುದ್ದೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗುತ್ತಿದೆ. ಆದರೆ, ಸಹಕಾರ ಇಲಾಖೆಯಲ್ಲಿ ಮಾತ್ರ ರದ್ದು ಮಾಡಿದೆ.

ಖಾಲಿಯೇ ಉಳಿಯಲಿವೆ: ಸರ್ಕಾರ ಕೆಲವು ಇಲಾಖೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳುತ್ತಿದೆ. ಆದರೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೂ ಸಹ ಇನ್ನೊಂದೆಡೆ, ರದ್ದು ಮಾಡುವ ಪ್ರಕ್ರಿಯೆ ಕೈಗೊಳ್ಳುವುದರಿಂದ ಮಂಜೂರಾದ ಹುದ್ದೆಗಳೆಲ್ಲವನ್ನೂ ತುಂಬಲು ಸಾಧ್ಯವಾಗುವುದಿಲ್ಲ. ಜತೆಗೆ, ನೌಕರರಲ್ಲಿ ಕಾರ್ಯಕ್ಷಮತೆ ಹೆಚ್ಚುವುದಿಲ್ಲವೆಂದು ಹೇಳಲಾಗುತ್ತಿದೆ.

ಕೊರತೆಯೇ ಹೆಚ್ಚು ಇರುವ ಇಲಾಖೆಗಳು: ಮಂಜೂರಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಿಂತ ಖಾಲಿ ಇರುವ ಹುದ್ದೆಗಳೇ ಕೆಲವು ಇಲಾಖೆಗಳಲ್ಲಿ ಹೆಚ್ಚಾಗಿವೆ. ಕೃಷಿ, ಪಶು ಸಂಗೋಪನೆ, ಸಹಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಇ-ಆಡಳಿತ, ಇಂಧನ, ಉನ್ನತ ಶಿಕ್ಷಣ, ವಾರ್ತೆ, ಕಾರ್ವಿುಕ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕನ್ನಡ ಮತ್ತು ಸಂಸ್ಕೃತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಗಣಿ, ಅಲ್ಪಸಂಖ್ಯಾತರ ಕಲ್ಯಾಣ, ಯೋಜನೆ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ರೇಷ್ಮೆ, ಕೌಶಲ್ಯಾಭಿವೃದ್ದಿ, ಪ್ರವಾಸೋದ್ಯಮ, ಸಣ್ಣ ಕೈಗಾರಿಕೆ, ಸಾರಿಗೆ, ನಗರಾಭಿವೃದ್ಧಿ, ಯುವ ಸಬಲೀಕರಣ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಹೆಚ್ಚಾಗಿವೆ.

ಹೊರ ಗುತ್ತಿಗೆ: ರಾಜ್ಯದಲ್ಲಿ ಹುದ್ದೆಗಳ ನೇಮಕಾತಿ ನಡೆಯದೇ ಇರುವುದರಿಂದ ಹೊರ ಗುತ್ತಿಗೆ ನೇಮಕ ಜಾಸ್ತಿಯಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಿ ಮತ್ತು ಡಿ ಗ್ರೂಪ್, ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು ಹಾಗೂ ವಾಹನ ಚಾಲಕರು ಸೇರಿದಂತೆ 82,700 ಜನ ಹೊರಗುತ್ತಿಗೆ ನೌಕರರಿದ್ದಾರೆ.

ಹೆಚ್ಚುವರಿ ಪ್ರಭಾರಕ್ಕೆ ಮೊರೆ: ಬಹುತೇಕ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಹೆಚ್ಚಾಗಿರುವ ಕಾರಣ ಸರ್ಕಾರದ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಹೆಚ್ಚುವರಿ ಪ್ರಭಾರಕ್ಕೆ ಮೊರೆ ಹೋಗಲಾಗಿದೆ. ಆದರೆ, ಇದರಿಂದ ಸಾರ್ವಜನಿಕರಿಗೆ ತ್ವರಿತವಾಗಿ ಸರ್ಕಾರದ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಶೇ.34 ಖಾಲಿ ಹುದ್ದೆ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಒಟ್ಟಾರೆ ಶೇ.34 ಇದೆ. ಒಟ್ಟಾರೆ 7,69,981 ಮಂಜೂರಾದ ಹುದ್ದೆಗಳಿದ್ದರೆ, ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸಂಖ್ಯೆ 5,11,272 ಎಂದು ಅಂಕಿ- ಅಂಶಗಳು ಹೇಳುತ್ತವೆ. ಖಾಲಿ ಹುದ್ದೆಗಳ ಸಂಖ್ಯೆ 2,58,709 ಎಂಬುದು ಸರ್ಕಾರವೇ ನೀಡಿರುವ ದಾಖಲೆಯಲ್ಲಿದೆ.

ಸರ್ಕಾರ ಹೇಳುವುದೇನು?

  • ಅನಗತ್ಯ ಹುದ್ದೆಗಳನ್ನು ಮಾತ್ರ ರದ್ದು ಮಾಡಲಾಗುತ್ತಿದೆ
  • ಸರ್ಕಾರದ ಮೇಲಾಗುವ ಆರ್ಥಿಕ ಹೊರೆಯನ್ನು ತಗ್ಗಿಸಬೇಕಾಗಿದೆ
  • ಇ-ಆಫೀಸ್ ತಂತ್ರಾಂಶ ಹಿನ್ನೆಲೆ ಅಧಿಕಾರಿಗಳೇ ಟೈಪಿಂಗ್ ಮಾಡಬೇಕು
  • ಡಿಕ್ಟೇಷನ್ ನೀಡಬೇಕಿಲ್ಲ, ಆದ್ದರಿಂದ ಕೆಲ ಹುದ್ದೆಗಳು ಅಗತ್ಯವಿಲ್ಲ
  • 7ನೇ ವೇತನ ಆಯೋಗ ಬಂದರೆ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಲಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net