

ಚಾಮರಾಜನಗರ: 2024ಕ್ಕೆ ಬಾಯ್, 2025ಕ್ಕೆ ಹಾಯ್...ಹಾಯ್ ಎನ್ನುವ ಸಮಯ ಸನ್ನಿಹಿತ. ಹೀಗಿರುವಾಗ ಹೊಸ ವರ್ಷಾಚರಣೆಗೆ ತಮ್ಮ ಕುಟುಂಬದೊಂದಿಗೆ ತೆರಳಲು ಹಲವರು ಈಗಾಗಲೇ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಬಸ್, ಟ್ರೈನ್ ಟಿಕೆಟ್ನಿಂದ ಹಿಡಿದು ಯಾವ ದಿನ ಅಲ್ಲಿರಬೇಕು, ಎಲ್ಲಿಂದ ಎಲ್ಲಿಗೆ ಪ್ರಯಾಣಿಸಬೇಕು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಸದ್ಯ ವರ್ಷದ ಮೊದಲ ದಿನವನ್ನು ಆಚರಿಸಲು ನೀವೇನಾದರೂ ಬಂಡೀಪುರದತ್ತ (Bandipur) ಪ್ಲ್ಯಾನ್ ಮಾಡುತ್ತಿದ್ದರೆ ಈಗಲೇ ಕೈಬಿಡುವುದು ಒಳಿತು.
ವರ್ಷಾಂತ್ಯ ಹಿನ್ನೆಲೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ಬಂಡೀಪುರದಲ್ಲಿ ವಾಸ್ತವ್ಯ ಹೂಡಿ, ಹೊಸ ವರ್ಷಾಚರಣೆ ಮಾಡಬೇಕೆಂದು ಪ್ಲ್ಯಾನ್ ಮಾಡಿಕೊಂಡಿರುವವರಿಗೆ ಡಿ.31 ಮತ್ತು ಜ.1ರಂದು ಅರಣ್ಯ ಇಲಾಖೆ ವಸತಿ ಗೃಹಗಳು ಲಭ್ಯವಿರುವುದಿಲ್ಲ. ಈ ಮಾಹಿತಿ ಪ್ರವಾಸಿಗರ ಗಮನಕ್ಕೆ ತರಲು ಬಂಡೀಪುರ ಅರಣ್ಯ ಇಲಾಖೆ ಇಚ್ಛಿಸಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಂದಲೂ ಬರುವ ಪ್ರವಾಸಿಗರ ಮೋಜು-ಮಸ್ತಿಗೆ ಅವಕಾಶ ಕೊಡಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆಗೆ ಸೇರಿದ ವಸತಿಗೃಹಗಳು, ಕಾಟೇಜ್‌ಗಳಲ್ಲಿ ಪ್ರತ್ಯೇಕವಾಗಿ ಈ ಎರಡು ದಿನ ವಾಸ್ತವ್ಯಕ್ಕೆ ಅವಕಾಶವಿರುವುದಿಲ್ಲ.
ಪ್ರತಿ ವರ್ಷವೂ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮೋಜು-ಮಸ್ತಿ ಮಾಡಲೆಂದು ರಾಜ್ಯದ ವಿವಿಧ ಭಾಗಗಳಿಂದ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರಿಂದ ವನ್ಯಜೀವಿಗಳ ಸಹಜ ಜೀವನಕ್ಕೆ ಧಕ್ಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಿಂದ ಅರಣ್ಯ ಇಲಾಖೆ ತನ್ನ ಅತಿಥಿಗೃಹಗಳನ್ನು ಬಾಡಿಗೆಗೆ ಕೊಡುವುದು ನಿರ್ಬಂಧಿಸುತ್ತ ಬಂದಿದೆ. ಅದರಂತೆಯೇ ಈ ಬಾರಿಯು ಸಹ ಅರಣ್ಯ ಇಲಾಖೆಯ ವಸತಿ ಗೃಹಗಳ ಬುಕಿಂಗ್ ಬ್ಲಾಕ್ ಮಾಡಿದೆ.
ಬಂಡೀಪುರದಲ್ಲಿರುವ ರೆಸಾರ್ಟ್‌ಗಳಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗದಿರಲು ಅರಣ್ಯ ಇಲಾಖೆ ಕ್ರಮ ವಹಿಸುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದು ರೆಸಾರ್ಟ್ ಗಳಲ್ಲಿ ಅಬ್ಬರದ ಸಂಗೀತ. ಕಣ್ಣು ಕುಕ್ಕುವ ದೀಪ ಅಳವಡಿಸಬಾರದು, ಅಬ್ಬರದ ವರ್ಷಾಚರಣೆ ಮಾಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಡಿ.31 ಮತ್ತು ಜ.1ರಂದು ಅರಣ್ಯ ಇಲಾಖೆಯ ವಸತಿ ಗೃಹಗಳಲ್ಲಿ ಮಾತ್ರ ವಾಸ್ತವ್ಯಕ್ಕೆ ಅವಕಾಶವಿಲ್ಲ. ಸಫಾರಿ ಎಂದಿನಂತೆ ಇರಲಿದೆ. ಈ ಕುರಿತು ಹುಲಿ ಯೋಜನೆ ನಿರ್ದೇಶಕ ಪ್ರಭಾಕರ್ "ವಿಜಯವಾಣಿ"ಯೊಂದಿಗೆ ಮಾತನಾಡಿ, ಸಫಾರಿ ಎಂದಿನಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.