ಕೆನಡಾ ಪ್ರಧಾನಿಗೆ ಹಿನ್ನಡೆ.. ಜಸ್ಟಿನ್ ಟ್ರುಡೊಗೆ ಅನಿರೀಕ್ಷಿತ ಶಾಕ್​ಕೊಟ್ಟ ಸಿಖ್ ನಾಯಕ!

cenada
Published on

ಒಟ್ಟಾವಾ: ಭಾರತದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ವಿವಾದಗಳ ಸೃಷ್ಟಿಗೆ ಕಾರಣರಾಗಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರಾಜಕೀಯವಾಗಿ ಅನಿರೀಕ್ಷಿತ ಹಿನ್ನಡೆ ಎದುರಿಸಿದ್ದಾರೆ. ಅವರ ಅಲ್ಪಸಂಖ್ಯಾತ ಲಿಬರಲ್ ಸರ್ಕಾರಕ್ಕೆ ಬೆಂಬಲ ನೀಡಿದ್ದ ಭಾರತೀಯ ಮೂಲದ ಜಗ್ಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.

ಕೆನಡಾದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತವೆ. ಜಸ್ಟಿನ್ ಟ್ರುಡೊ ಅವರ ಪಕ್ಷವು ಸತತ ಮೂರು ಬಾರಿ ಗೆದ್ದು ಸರ್ಕಾರವನ್ನು ರಚಿಸಿತ್ತು. ಟ್ರೂಡೊ ಒಂದು ಬಾರಿ ಮಾತ್ರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದ್ದು, ಇನ್ನೆರಡು ಬಾರಿ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು. ಈಗ ಅವರ ಮಿತ್ರ ಜಗ್ಮೀತ್ ಸಿಂಗ್ ಪಕ್ಷ ಶಾಕ್ ನೀಡಿದೆ. ಕಳೆದ ಚುನಾವಣೆಯ ನಂತರ ಟ್ರುಡೊಗೆ ಬೆಂಬಲ ನೀಡಿದ ಪಕ್ಷವು ಒಂದು ವರ್ಷದ ಸಂಬಂಧ ಕಡಿದುಕೊಂಡು ಗುಡ್​ಬೈ ಹೇಳಿದೆ.

ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದ್ದು, ಜಗ್ಮೀತ್ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದರಿಂದ ಟ್ರೂಡೊ ಪಕ್ಷದ ಮೇಲೆ ಇದರ ಪ್ರಭಾವ ಬೀರಲಿದೆ. ಜೊತೆಗೆ ಈಗ ಟ್ರುಡೊ ಸರ್ಕಾರವು ತೂಗುಯ್ಯಾಲೆಯಲ್ಲಿ ಇರುವಂತಾಗಿದೆ. ತಮ್ಮ ಪಕ್ಷವು ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂಪಡೆದಿದೆ ಎಂದು ಜಗಮೀತ್ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ.

'ಜಸ್ಟಿನ್ ಟ್ರುಡೊ ಕಾರ್ಪೊರೇಟ್ ಪರ ಇದ್ದು, ಜನರನ್ನು ನಿರಾಸೆಗೊಳಿಸಿದ್ದಾರೆ. ಕೆನಡಿಯನ್ನರಿಂದ ಮತ್ತೊಂದು ಅವಕಾಶ ಪಡೆಯಲು ಅವರು ಅರ್ಹರಲ್ಲ ಎಂದು ಜಗ್ಮೀತ್ ಆರೋಪಿಸಿದ್ದಾರೆ. ಕೆನಡಾದ ಕುಟುಂಬಗಳು ಮತ್ತು ಯುವಕರು ಕಾರ್ಪೊರೇಟ್ ಜನರ ಕೈಗೆ ಬೀಳುವುದನ್ನು ತಡೆಯಲು ದೊಡ್ಡ ಹೋರಾಟ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

2021 ರ ಕೆನಡಾದ ಚುನಾವಣೆಯಲ್ಲಿ ಟ್ರುಡೊ ಅವರ ಲಿಬರಲ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆದ್ದರೂ, ಸರ್ಕಾರ ರಚಿಸಲು ಅಗತ್ಯವಿರುವ ಬಹುಮತಕ್ಕಿಂತ 10 ಸ್ಥಾನಗಳ ಕೊರತೆಯಿದೆ. 25 ಸ್ಥಾನಗಳನ್ನು ಗೆದ್ದ ನ್ಯೂ ಡೆಮಾಕ್ರಟಿಕ್ ಪಕ್ಷದ ಬೆಂಬಲದೊಂದಿಗೆ ಟ್ರುಡೊ ಮತ್ತೆ ಸರ್ಕಾರ ರಚಿಸಿದ್ದರು. ಉಭಯ ಪಕ್ಷಗಳ ನಡುವಿನ ಒಪ್ಪಂದವು ಮುಂದಿನ ವರ್ಷ ಅಕ್ಟೋಬರ್ ವರೆಗೆ ಇರುತ್ತದೆ. ಆದರೆ ಒಪ್ಪಂದವನ್ನು ಅನಿವಾರ್ಯವಾಗಿ ಅಂತ್ಯಗೊಳಿಸಲಾಗಿದೆ ಎಂದು ಎಂದು ಎನ್‌ಡಿಪಿಪಿ ವಕ್ತಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net