ಸಂಪಾದಕೀಯ | ಹದ್ದು ಮೀರಿದ ಕೆನಡಾ

ವಿಜಯವಾಣಿ (7)
Published on

ಭಾರತದ ವಿರುದ್ಧ ಕೆನಡಾ ಮಾಡುತ್ತಿರುವ ಅವಾಂತರಗಳು ನಿಲ್ಲುವಂತೆ ಕಾಣುತ್ತಿಲ್ಲ. ಈ ಬಾರಿಯಂತೂ ಅದರ ವರ್ತನೆ ಹದ್ದು ಮೀರಿದ್ದು, ರಾಜತಾಂತ್ರಿಕ ಹಾಗೂ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿ ಎಸಗುವಂತಿದೆ. ರಾಜಕೀಯ ಲಾಭಕ್ಕಾಗಿ ಒಂದರ ಬಳಿಕ ಒಂದರಂತೆ ತಪು್ಪ ಹೆಜ್ಜೆಗಳನ್ನು ಇರಿಸುತ್ತಿರುವ ಕೆನಡಾ ಸರ್ಕಾರ, ಇದರಿಂದಾಗುವ ಪರಿಣಾಮಗಳ ಬಗ್ಗೆ ನಿರ್ಲಕ್ಷ್ಯ ತಳೆದಿದೆ. ಭಾರತ ಮಾತ್ರವಲ್ಲ ಇಡೀ ಅಂತಾರಾಷ್ಟ್ರೀಯ ವಲಯ ಕೆನಡಾದ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಕೆನಡಾ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಹತ್ಯೆಗೈಯುವ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಷಾ ಅವರ ಕೈವಾಡವಿದೆ ಎಂದು ಇತ್ತೀಚೆಗೆ ನಿರಾಧಾರ ಆರೋಪ ಮಾಡಿದ್ದ ಕೆನಡಾ ಸರ್ಕಾರ ಇದೀಗ ಭಾರತವನ್ನು ಸೈಬರ್ ಬೆದರಿಕೆಯ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ಮೂಲಕ ತನ್ನ ಧಾರ್ಷ್ಟೃವನ್ನು ಪ್ರದರ್ಶಿಸಿದೆ. ಈ ಮೂಲಕ ಕೆಲವು ದಿನಗಳಿಂದ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದೆ. ಇದಾದ ಮರುದಿನವೇ ಕೆನಡಾದ ಬ್ರಾಂಪ್ಟನ್​ನಲ್ಲಿರುವ ಹಿಂದು ಸಭಾ ದೇವಾಲಯದ ಆವರಣದೊಳಗೆ ಖಲಿಸ್ತಾನಿ ಪರ ಪ್ರತಿಭಟನಾಕಾರರು ನುಗ್ಗಿ, ಅಲ್ಲಿನ ಜನರೊಂದಿಗೆ ಘರ್ಷಣೆ ನಡೆಸಿದ್ದಾರೆ. ಹಿಂದು ಭಕ್ತರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಬಾಂಗ್ಲಾದೇಶದ ನಂತರ ಕೆನಡಾದಲ್ಲೂ ದೇವಸ್ಥಾನಗಳು ಮತ್ತು ಹಿಂದುಗಳು ಟಾರ್ಗೆಟ್ ಆಗಿದ್ದಾರೆ. ಕೆನಡಾದಲ್ಲಿ ಹಿಂದು ಮಂದಿರಗಳ ಮೇಲೆ ದಾಳಿ ನಡೆದಿರುವುದು ಇದು ಮೊದಲೇನಲ್ಲ. ಟೊರೊಂಟೊ ಬ್ರಿಟಿಷ್ ಕೊಲಂಬಿಯಾದಲ್ಲಿನ ಹಿಂದು ಮಂದಿರಗಳ ಮೇಲೆ ಈ ಹಿಂದೆ ದಾಳಿಗಳು ನಡೆದಿವೆ.

ಹಿಂದು ಮಹಾಸಭಾ ಮಂದಿರದ ಮೇಲೆ ‘ಭಾರತ ವಿರೋಧಿ’ ಜನರಿಂದ ನಡೆದ ದಾಳಿಯನ್ನು ಒಟ್ಟಾವದಲ್ಲಿನ ಭಾರತದ ಹೈಕಮಿಷನ್ ಬಲವಾಗಿ ಖಂಡಿಸಿದೆ. ಹಿಂದು ಮಹಾಸಭಾ ಮಂದಿರ ಮತ್ತು ಭಾರತದ ದೂತವಾಸ ಕಚೇರಿ ಜಂಟಿಯಾಗಿ ಆಯೋಜಿಸಿದ್ದ ಕಾನ್ಸುಲರ್ ಶಿಬಿರಕ್ಕೆ ಈ ಘಟನೆಯಿಂದ ಅಡ್ಡಿಯಾಯಿತು ಎಂದು ಅದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದೆ. ದೇಗುಲ ಮೇಲಿನ ದಾಳಿಯನ್ನು ವಿರೋಧಿಸಿದ ಭಕ್ತರ ಮೇಲೆ ಅಲ್ಲಿನ ಪೊಲೀಸರೇ ಹಲ್ಲೆ ನಡೆಸಿದ್ದಾರೆ. ಇದು ಉದ್ಧಟತನದ ಪರಮಾವಧಿ.

ಈ ರೀತಿಯ ವರ್ತನೆಯನ್ನು ಭಾರತ ಸಹಿಸಬಾರದು. ಘಟನೆಯನ್ನು ಖಂಡಿಸಿ ಸುಮ್ಮನಾಗಬಾರದು. ಇತರ ದೇಶಗಳ ನೆರವು ಪಡೆದು, ಕೆನಡಾ ಸರ್ಕಾರಕ್ಕೆ ಬುದ್ಧಿ ಕಲಿಸಲು ಇದು ಸಕಾಲ. ಇಲ್ಲವಾದಲ್ಲಿ ಕೆನಡಾದ ಉದ್ಧಟತನ ಮುಂದುವರಿಯುತ್ತದೆ ಮತ್ತು ಅಲ್ಲಿರುವ ಭಾರತೀಯ ನಾಗರಿಕರು ಭದ್ರತೆ ಇಲ್ಲದೆ ಭೀತಿಯಿಂದ ದಿನದೂಡಬೇಕಾಗುತ್ತದೆ. ಹಾಗಾಗಿ, ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತೀವ್ರಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net