ಬೆಂಗಳೂರಲ್ಲಿ ಖರ್ಜೂರ ಬೆಳೆಯಬಹುದೇ?

dates 15 mar 20
Published on

ಖರ್ಜೂರವನ್ನು ಕೋಲಾರದಲ್ಲಿ ಬೆಳೆದಿದ್ದಾರಂತೆ. ಅಂದರೆ ನಾವು ಬೆಂಗಳೂರಿನಲ್ಲೂ ಬೆಳೆಯಬಹುದೇ? |

ಕೋಲಾರ ಮಧು

ಹೌದು ಖಂಡಿತಾ ಬೆಳೆಯಬಹುದು. ನೀವು ನಿಮ್ಮ ಜಮೀನು, ನೀರಿನ ಲಭ್ಯತೆ ಮುಂತಾದ ಮಾಹಿತಿಗಳನ್ನು ಕೊಟ್ಟಿಲ್ಲ. ಇರಲಿ, ನೀವಿಲ್ಲಿ ಅದರ ಒಂದಿಷ್ಟು ಮಾಹಿತಿಗಳನ್ನು ಕೊಡುತ್ತೇವೆ. ಇನ್ನಷ್ಟು ವಿವರ ಬೇಕಿದ್ದರೆ ಬೆಳೆದವರನ್ನು ಸಂರ್ಪಸಿ. ಖರ್ಜೂರ 70ರಿಂದ 75 ಅಡಿಗಳಷ್ಟು ಎತ್ತರ ಹಾಗೂ ಹತ್ತು ಅಡಿ ಸುತ್ತಳತೆಯಷ್ಟು ವ್ಯಾಪಿಸುವ ಮರ. ಬೀಜಗಳಿಂದ ಗಿಡ ಹುಟ್ಟುತ್ತದೆ. ಆದರೆ ಬುಡದಲ್ಲಿ ಬರುವ ಕಂದುಗಳು ಅಥವಾ ಕಟಂಗ್​ಗಳನ್ನು ನೆಡುವುದು ಸೂಕ್ತ. ಬೀಜದ ಗಿಡಗಳು ಫಸಲು ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮೂರು ವರ್ಷ ದಾಟಿದ ಗಿಡಗಳ ಕಟಿಂಗ್​ಗಳನ್ನು ನೆಡಬೇಕು. ಗಂಡು-ಹೆಣ್ಣು ಗಿಡಗಳು ಸಮಪ್ರಮಾಣದಲ್ಲಿರಬೇಕು. ಒಂದು ಎಕರೆಗೆ 100 ಗಿಡಗಳು ಹಿಡಿಸುತ್ತವೆ. ಮಣ್ಣಿನಲ್ಲಿ ಶೇಕಡಾ ನಾಲ್ಕರಷ್ಟು ಲವಣಾಂಶವಿರಬೇಕು. ಇಲ್ಲದಿದ್ದರೆ ಸೇರಿಸಬೇಕಾಗುತ್ತದೆ. ನೀರು ಬಸಿದುಹೋಗುವ ಮರಳುಮಿಶ್ರಿತ ಗೊಡುಮಣ್ಣು ಒಳ್ಳೆಯದು. ಆದರೆ ಮಣ್ಣಿನಡಿಯಲ್ಲಿ ತೇವಾಂಶವಿದ್ದರೆ ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಉಂಟಾಗದು. ಮಳೆಗಾಲದಲ್ಲಿ ನೀರು ನಿಲ್ಲದಿರಲು ಕಾಲುವೆ ತೆಗೆಯುವುದು ಅವಶ್ಯಕ. ಹನಿ ನೀರಾವರಿ ಅಳವಡಿಸಿದರೆ ಬಿರುಬಿಸಿಲ ನೆಲದಲ್ಲೂ ಖರ್ಜೂರ ಸೊಂಪಾಗಿ ಬೆಳೆಯುತ್ತದೆ. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರಗಳು ಸಾಕು. ಕೃತಕ ಪರಾಗಸ್ಪರ್ಶ ಮಾಡುವುದನ್ನು ಕಲಿಯಬೇಕು. ನಮ್ಮಲ್ಲಿ ಆಗಸ್ಟ್ ಸೆಪ್ಟೆಂಬರ್​ನಲ್ಲಿ ಕೊಯ್ಲಿಗೆ ಬರುತ್ತದೆ. ಅನೇಕ ಹಂತಗಳಲ್ಲಿ ಕೊಯ್ಲು ಮಾಡಬಹುದು. ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡುವುದನ್ನೂ ಸಹ ಕಲಿಯಬೇಕು. ಹೆಚ್ಚಿನ ಮಾಹಿತಿಗೆ 3 ಮಾರ್ಚ್ 2014ರ ವಿಜಯವಾಣಿ ಪತ್ರಿಕೆಯ ಕೃಷಿ ಚಾವಡಿ ಓದಿ. ಬೆಂಗಳೂರಿನಲ್ಲಿರುವ ತೋಟಗಾರಿಕಾ ಇಲಾಖೆಯ ಮುಖ್ಯ ಕಛೇರಿಯನ್ನು ಸಂರ್ಪಸಿ.

ಅಡಿಕೆ ಸೋಗೆ, ಸಿಪ್ಪೆ ಪುಡಿ ಮಾಡುವ ಯಂತ್ರ ತೆಂಗಿನಸೋಗೆ, ಅಡಿಕೆ ಸೋಗೆ, ಸಿಪ್ಪೆ ಪುಡಿ ಮಾಡುವ ಯಂತ್ರದ ಮಾಹಿತಿ ನೀಡಿ.

| ಮಲ್ಲಿಕಾರ್ಜುನ ಚಳ್ಳಕೆರೆ

ಅಡಿಕೆ ಸೋಗೆ ಬಿಸಿಲಿಗೆ ಸಿಕ್ಕರೆ ತಾನಾ ತಾನಾಗಿ ಪುಡಿ ಪುಡಿಯಾಗುತ್ತದೆ. ಅಡಿಕೆ ಸಿಪ್ಪೆ, ತೆಂಗಿನಸಿಪ್ಪೆ, ತೆಂಗಿನ ಸೋಗೆಗಳಲ್ಲಿ ನಾರಿನಂಶ ಜಾಸ್ತಿ. ಪುಡಿ ಮಾಡಿದರೂ ಮಣ್ಣಿಗೆ ತಕ್ಷಣ ಸೇರಿಕೊಳ್ಳದು. ವಿವಿಧ ರಾಸಾಯನಿಕಗಳನ್ನು ಅಥವಾ ಸೂಕ್ಷ್ಮಜೀವಿಗಳನ್ನು ಬೆರೆಸಿ ಅದನ್ನು ಕಳಿಸಬೇಕಾಗುತ್ತದೆ. ಆಮೇಲೆ ಗೊಬ್ಬರದೊಂದಿಗೆ ಭೂಮಿಗೆ ಸೇರಿಸಲು ಸಾಧ್ಯ. ಇವುಗಳನ್ನು ಚೂರು ಚೂರು ಮಾಡಲು ಕತ್ತಿಯೇ ಒಳ್ಳೆಯದು. ಇವುಗಳನ್ನು ಪುಡಿ ಮಾಡುವ ಅನೇಕ ರೀತಿಯ ಯಂತ್ರಗಳಿವೆ. ಅವುಗಳಲ್ಲಿ ಬೆಂಗಳೂರಿನವರು ಒಂದು ಯಂತ್ರವನ್ನು ಈಗ್ಗೆ 20 ವರ್ಷಗಳ ಹಿಂದೆ ಸಿದ್ಧಪಡಿಸಿದ್ದರು. ಯಾವ ಯಂತ್ರವೂ ರೈತಸ್ನೇಹಿ ಅಲ್ಲ. ಯಂತ್ರದ ಶಬ್ದ ಕರ್ಕಶ. ಸುತ್ತಮುತ್ತಲಿನ ಪ್ರದೇಶವೆಲ್ಲಾ ಗಡಗಡ ನಡುಗುತ್ತದೆ. ಸೋಗೆ, ಸಿಪ್ಪೆಗಳನ್ನು ಹಾಕಲು, ತುಂಬಲು ಎರಡು ಜನ ಬೇಕು. ಕತ್ತರಿಸುವ ಬ್ಲೇಡ್​ನ ಬಾಳಿಕೆ ತುಂಬಾ ಕಡಿಮೆ. ಹೀಗೆ ಯಂತ್ರ ಕೊಂಡವರದೆಲ್ಲಾ ನೂರಾರು ತಕರಾರುಗಳು. ಕೆಲವರ ಮನೆಯಲ್ಲಿ ಕೆಲಸ ಮಾಡದೆ, ಸರಿಪಡಿಸಲಾಗದೆ ದೊಡ್ಡ ಹೊರೆಯಾಗಿ ಬಿದ್ದಿದೆ. ಯಂತ್ರ ನೋಡಬೇಕೆಂದರೆ ತಿಪಟೂರಿನ ಕೆ.ಬಿ. ಕ್ರಾಸ್ ಪ್ರಕಾಶ್​ರವರನ್ನು ಸಂರ್ಪಸಿ: 9449173663

ಹಿತ್ತಲ ಗಿಡಗಳಿಗೆ ಡೆಟಾಲ್ ಸಿಂಪಡಿಸಬಹುದೇ? ಬಚ್ಚಲಿನಿಂದ ಬರುವ ಡಿಟರ್ಜೆಂಟ್​ಯುುಕ್ತ ಬಿಸಿನೀರಿಗೆ ಯಾವ ಗಿಡಗಳು ಸಾಯದೇ ಉಳಿಯುತ್ತವೆ? ನಾವು ಡೆಟ್ಟಾಲ್, ಸಾವಲಿನ್ ಮುಂತಾದ ಕ್ರಿಮಿನಾಶಕಗಳನ್ನು ಮನೆಯ ಹಿತ್ತಿಲಿನಲ್ಲಿರುವ ಗಿಡಗಳಿಗೆ ಸಿಂಪಡಿಸಬಹುದೇ?

| ಅನುಪಮ, ದ್ರೌಪದಮ್ಮ, ಸುರೇಖ ಶಿವಮೊಗ್ಗ

ಬಚ್ಚಲಿನ ನೀರು ಹೊರಬರುವ ವೇಳೆಗೆ ಸಾಕಷ್ಟು ತಣಿದಿರುತ್ತದೆ. ಆದರೆ ಅದರಲ್ಲಿ ಸೋಪು, ಡಿಟರ್ಜೆಂಟ್, ಎಣ್ಣೆ ಏನೆಲ್ಲಾ ಸೇರಿರುತ್ತದೆ. ಹಳ್ಳಿಗಳಲ್ಲಿ ಈ ನೀರನ್ನು ತೊಂಡೆ, ಬಸಳೆ ಬಳ್ಳಿಗಳಿಗೆ ಹರಿಯಲು ಬಿಡುತ್ತಾರೆ. ತೆಂಗಿನಮರಕ್ಕೂ ಎರಡು ಅಡಿ ದೂರದಲ್ಲಿ ಉಂಗುರಕಣಿ ಮಾಡಿ ಹರಿಸಬಹುದು. ಬಚ್ಚಲಿನ ನೀರು ಹರಿವ ದಂಡೆಗಳಲ್ಲಿ ಲಾವಂಚ, ನಿಂಬೆಹುಲ್ಲು, ಪಾಮರೋಸಾ ಹುಲ್ಲು ಚೆನ್ನಾಗಿ ಬೆಳೆಯುತ್ತವೆ. ಇವು ಈ ನೀರಿನಲ್ಲಿನ ರಾಸಾಯನಿಕಗಳನ್ನು ನೆಲದಾಳಕ್ಕೆ ಇಂಗಿಸಲು ಸಹಕರಿಸುತ್ತವೆ. ಬಚ್ಚಲು ಹಾಗೂ ಶೌಚಾಲಯದ ನೀರು ಒಟ್ಟಿಗೆ ಸೇರಿ ಹರಿಯುವಂತೆ ಮಾಡಿದರೆ, ತರಕಾರಿಗಳನ್ನು ಬೆಳೆಯಬಹುದು. ಯಾವುದೇ ಗಿಡಕ್ಕೂ ನೀಡಬಹುದು. ನೀವು ಹೇಳಿರುವ ಡೆಟ್ಟಾಲ್, ಸಾವಲಿನ್ ಮುಂತಾದ ಎಲ್ಲಾ ದ್ರಾವಣಗಳು ಕ್ರಿಮಿನಾಶಕಗಳು. ಅವುಗಳನ್ನು ನಾವು ಮನುಷ್ಯರು ಬಳಸುವುದು ಸಾಮಾನ್ಯ. ಹಾಗೇ ಗಿಡಗಳಿಗೂ ಬಳಸಬಹುದು. ಆದರೆ ಪ್ರಮಾಣವನ್ನು ನೀವೇ ಪ್ರಯೋಗ ಮಾಡಿ ಕಂಡುಕೊಳ್ಳಬೇಕು. ನನಗೆ ಗೊತ್ತಿರುವಂತೆ ಯಾವುದೇ ವಿಜ್ಞಾನಿಗಳೂ ಇದರ ಪ್ರಯೋಗ ಮಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net