ಅಡಿಕೆ ಕೃಷಿಕರಿಗೆ ಸಂಕಷ್ಟ; ರಾಜ್ಯದಲ್ಲಿ ತಲೆ ಎತ್ತಿದ ವಿದೇಶಿ ಅಡಿಕೆ ಮಾಫಿಯಾ, ಪ್ರಧಾನಿಗೆ ಪತ್ರ

arecanut new
Published on

ಬೆಂಗಳೂರು: ರಾಜ್ಯದಲ್ಲಿ ವಿದೇಶಿ ಅಡಿಕೆ ದಂಧೆ ನಡೆಯುತ್ತಿದ್ದು, ಇದರಿಂದ ನಮ್ಮ ರಾಜ್ಯದ ಅಡಿಕೆಗೆ ಹೊಡೆತ ಬಿದ್ದಿದೆ. ಅಡಿಕೆ ಅಕ್ರಮದ ವಿರುದ್ದ, ಅಡಿಕೆ ಅಕ್ರಮ ಆಮದು ತಡೆಗೆ ಕೋರಿ ಕ್ಯಾಂಪ್ಕೋ ಸಂಸ್ಥೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದಿದೆ.

ಕಡಿಮೆ ಬೆಲೆಗೆ ಬರ್ಮಾ ಹಾಗೂ ಇತರೆ ದೇಶದಿಂದ ಅಡಿಕೆ ಆಮದು ಆಗುತ್ತಿದ್ದು ಕರಾವಳಿಯ ಅಡಿಕೆಯೊಂದಿಗೆ ಅದನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೆಲೆಯೊಂದಿಗೆ ಕರಾವಳಿಯ ಅಡಿಕೆಯ ಗುಣಮಟ್ಟವೂ ಕುಸಿಯುತ್ತಿದೆ.

ಇಂಡೋನೇಷ್ಯಾ, ಬರ್ಮಾ, ಭೂತಾನ್, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆ ಭಾರತಕ್ಕೆ ಸಾಗಾಟ ಮಾಡಲಾಗುತ್ತಿದೆ. ಈಶಾನ್ಯ ಪ್ರದೇಶಗಳಿಂದ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಗಳು ಭಾರತಕ್ಕೆ ಎಂಟ್ರಿ ಕೊಡುತ್ತಿವೆ. ಮಂಗಳೂರು ಏರ್ ಪೋರ್ಟ್ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ಮೂಲಕವೂ ವಿದೇಶಿ ಅಡಿಕೆ ಬರುತ್ತಿದೆ.   ಕಸ್ಟಮ್ಸ್ ಸುಂಕ ರಹಿತವಾಗಿ ಶ್ರೀಲಂಕಾದಿಂದ ಅಡಿಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಕೇಂದ್ರ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ ಆಪರೇಟಿವ್(ಕ್ಯಾಂಪ್ಕೊ) ಸಂಸ್ಥೆ ಪ್ರಧಾನಿಗೆ ಪತ್ರ ಬರೆದು ಅಕ್ರಮ ಆಮದು ತಡೆಗೆ ಮನವಿ ಮಾಡಿದೆ.

ಅಕ್ರಮ ಅಡಿಕೆ ಅಮದಿನಿಂದ ಕರಾವಳಿಯ ಅಡಿಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಅಕ್ರಮ ಅಮದಿನಿಂದ ರಾಜ್ಯದಲ್ಲಿ ಸ್ಥಳೀಯ ಅಡಿಕೆಯ ಭರ್ಜರಿ ಬೆಲೆಯ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ. ಅಡಿಕೆ ಬೆಳೆಯನ್ನೇ ನಂಬಿಕೊಂಡ ಕರಾವಳಿಯ ಕೃಷಿಕರಿಗೆ ಭಾರೀ ಹೊಡೆತ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net