

ಪುಣೆ: ಬಾಲಕಿಯರ ಶೌಚಾಲಯದಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ನೀಡಿದ ದೂರಿನ ಬೆನ್ನಲ್ಲೇ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ವಿವರ: ಪುಣೆಯ ತಾಲೇಗಾಂವ್‌ನಲ್ಲಿರುವ ಡಿವೈ ಪಾಟೀಲ್ ಶಾಲೆಯಲ್ಲಿ ಬಾಲಕಿಯರ ಶೌಚಾಲಯದೊಳಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿರುವ ಬಗ್ಗೆ ಅರಿತ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ದೂರು ನೀಡಿದ್ದಾರೆ. ಶೀಘ್ರವೇ ಪ್ರಾಂಶುಪಾಲರನ್ನು ಪ್ರಶ್ನಿಸಿದ ಪೋಷಕರು ಮತ್ತು ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ಸದಸ್ಯರು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರಿಶ್ಚಿಯನ್ ಪ್ರಾರ್ಥನೆಗಳನ್ನು ಓದುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಸದಸ್ಯರು ಪ್ರಾಂಶಪಾಲರನ್ನು ಥಳಿಸಿದ್ದಾರೆ. ಕೂಡಲೇ ಈ ಘಟನೆಯ ಬಗ್ಗೆ ತನಿಖೆ ನಡೆಸಿ ಶಾಲೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಶಿಕ್ಷಣ ಇಲಾಖೆ ಅಧಿಕಾರಿ ಸುದಮ್ ವಾಲುಂಜ್, ಪ್ರಾಂಶುಪಾಲರ ವಿರುದ್ಧ ಶಾಲಾ ಆಡಳಿತ ಮಂಡಳಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).