

Mobile Record : ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಮಾಳವೀಯಾ ನಗರದಲ್ಲಿರುವ ಎಂಆರ್‌ಐ ಕೇಂದ್ರದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯರ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಆಗಿರುವ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಈ ಘಟನೆ ಗುರುವಾರ ನಡೆದಿದೆ. ಜಹಾಂಗೀರಾಬಾದ್‌ನ ಯುವಕನೊಬ್ಬ ತನ್ನ ಪತ್ನಿಯನ್ನು ಪರೀಕ್ಷೆಗಾಗಿ ಮಾಳವೀಯನಗರದ ಎಂಆರ್‌ಐ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದ. ಪರೀಕ್ಷೆಗೂ ಮುನ್ನ ಸಿಬ್ಬಂದಿ ಆಕೆಯನ್ನು ಬಟ್ಟೆ ಬದಲಾಯಿಸುವ ಕೋಣೆಗೆ ಕಳುಹಿಸಿದ್ದರು. ಮಹಿಳೆ ಬಟ್ಟೆ ಬದಲಾಯಿಸುವಾಗ ಸೀಲಿಂಗ್‌ನಲ್ಲಿ ಕ್ಯಾಮೆರಾವನ್ನು ಹೋಲುವ ವಸ್ತು ಕಂಡಿದೆ. ಬಳಿಕ ಆಕೆಯ ಪತಿ ಅನುಮಾನಾಸ್ಪದವಾಗಿ ಕ್ಯಾಮೆರಾವನ್ನು ನೋಡಿದಾಗ ಅದು ರೆಕಾರ್ಡಿಂಗ್ ಮೋಡ್‌ನಲ್ಲಿರುವ ಮೊಬೈಲ್ ಫೋನ್ ಎಂಬುದು ಗೊತ್ತಾಗಿದೆ. ದಂಪತಿ ಅದನ್ನು ಗುರುತಿಸುವ ಹೊತ್ತಿಗೆ, ಮೊಬೈಲ್ ಫೋನ್‌ನಲ್ಲಿ ಅಷ್ಟರಲ್ಲಾಗಲೇ 27 ನಿಮಿಷಗಳ ವಿಡಿಯೋ ರೆಕಾರ್ಡ್ ಆಗಿತ್ತು.
ಇದರಿಂದ ಕುಪಿತಗೊಂಡ ಪತಿ ಎಂಆರ್‌ಐ ಕೇಂದ್ರದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಬಳಿಕ ಹೇಗೋ ಪೊಲೀಸ್ ಠಾಣೆಗೆ ಆಗಮಿಸಿದ ದಂಪತಿ ದೂರು ದಾಖಲಿಸಿದ್ದಾರೆ. ತಕ್ಷಣ ಸ್ಪಂದಿಸಿದ ಪೊಲೀಸರು ಬಟ್ಟೆ ಬದಲಾಯಿಸುವ ಕೋಣೆಯನ್ನು ಸೀಲ್ ಮಾಡಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮೊಬೈಲ್‌ನಲ್ಲಿ ಹಲವು ಅಶ್ಲೀಲ ವಿಡಿಯೋಗಳಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ವಿಶಾಲ್ ಠಾಕೂರ್ (23) ಎಂಬ ನೌಕರನನ್ನು ಅಪರಾಧಿ ಎಂದು ಪೊಲೀಸರು ಗುರುತಿಸಿದ್ದಾರೆ. ಕೂಡಲೇ ಆತನನ್ನು ಬಂಧಿಸಿ ತನಿಖೆ ಆರಂಭಿಸಲಾಗಿದೆ. ಉದ್ಯೋಗಿಯನ್ನು ನೇಮಿಸುವಾಗ ಯಾವುದೇ ಪರಿಶೀಲನೆ ನಡೆಸಿಲ್ಲ ಎಂದು ಅರೇರಾ ಹಿಲ್ಸ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನೋಜ್ ಪಟ್ವಾ ತಿಳಿಸಿದ್ದಾರೆ.
ವಿಶಾಲ್ ತೆಗೆದ ವಿಡಿಯೋಗಳನ್ನು ಎಲ್ಲಿಯಾದರೂ ಶೇರ್ ಮಾಡಲಾಗಿದೆಯೇ ಅಥವಾ ದುರ್ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಹಿಳೆಯರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಎಂಆರ್‌ಐ ಕೇಂದ್ರಗಳಲ್ಲಿ ಸುರಕ್ಷತಾ ಮಾನದಂಡಗಳ ಕೊರತೆಯನ್ನು ಈ ಘಟನೆ ಬಯಲಿಗೆಳೆದಿದೆ. ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವುದು ಗಂಭೀರ ಅಪರಾಧ. ಇಂತಹ ಘಟನೆಗಳಿಗೆ ಎಲ್ಲ ಜನರು ಸೂಕ್ಷ್ಮವಾಗಿ ಸ್ಪಂದಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಹಕರಿಸಬೇಕಿದೆ. (ಏಜೆನ್ಸೀಸ್)