ಶಾಂತ ಮನಸ್ಸು

photo (3)
Published on

ಸಂತೋಷಕ್ಕೆ ಎರಡು ಮಾರ್ಗಗಳಿವೆ. ಒಂದು: ನಮಗೆ ಬೇಕಾದುದನ್ನು ಪಡೆಯಲು ಶ್ರಮಿಸುವುದು. ಸಾಧ್ಯವಾಗದಿದ್ದರೆ ಎರಡು: ಏನು ಪ್ರಾಪ್ತಿಯಾಗುವುದೋ ಅದರಲ್ಲಿ ತೃಪ್ತಿ ಪಡೆಯುವುದು.ಈ ಜಗತ್ತಿನಲ್ಲಿ, ನೂರಕ್ಕೆ ತೊಂಬತ್ತೊಂಬತ್ತು ಭಾಗ ನಮಗೆ ಬೇಕಾದ ಹಾಗೆ ಸನ್ನಿವೇಶಗಳು ಇರುವುದೇ ಇಲ್ಲ. ನಮಗೆ ಬೇಕಾದುದನ್ನು ಪಡೆಯುವುದು ಬಹುತೇಕ ಅಸಾಧ್ಯ. ಆದ್ದರಿಂದ ನಮ್ಮ ಜೀವನದಲ್ಲಿ ಬರುವುದನ್ನು ಸಂತೋಷದಿಂದ ಸ್ವೀಕರಿಸುವುದು ಒಂದೇ ಪರಿಹಾರ. ಬಾಹ್ಯ ಘಟನೆಗಳ ಮೇಲೆ ನಮಗೆ ನಿಯಂತ್ರಣವಿಲ್ಲದಿರಬಹುದು, ಆದರೆ ಆಂತರಿಕ ಮನಸಿನ ಶಾಂತಿ ನಮ್ಮ ಆಯ್ಕೆಯಾಗಿದೆ. 70 ರ ದಶಕದಲ್ಲಿ ಗುರುದೇವ ಸ್ವಾಮೀ ಚಿನ್ಮಯಾನಂದರ ಪ್ರವಚನವನ್ನು ನೈಜೀರಿಯಾದಲ್ಲಿ ಏರ್ಪಡಿಸಲಾಗಿತ್ತು.

ಯಜ್ಞದ ನಂತರ, ಗುರುದೇವರು ಘಾನಾ ದ್ವೀಪಗಳಿಗೆ ಹೋದರು. ಅಲ್ಲಿಂದ ಹಿಂತಿರುಗುವ ವಿಮಾನದಲ್ಲಿ ಭಕ್ತರ ಗುಂಪಿಗೆ ಶುದ್ಧ ಸಸ್ಯಾಹಾರಿ ಆಹಾರವನ್ನು ಕೊಡುವಂತೆ ಆಯೋಜಕರು ವಿಮಾನಯಾನ ಸಂಸ್ಥೆಗೆ ಮೊದಲೇ ವಿನಂತಿಸಿದ್ದರೂ, ಮೊಟ್ಟೆಯ ಚೂರುಗಳಿಂದ ಅಲಂಕರಿಸಲ್ಪಟ್ಟ ಸಸ್ಯಾಹಾರಿ ಆಹಾರವನ್ನು ಅವರು ತಂದುಕೊಟ್ಟರು. ಇದನ್ನು ನೋಡುತ್ತಲೇ ಭಕ್ತರ ಹೃದಯವೇ ನಿಂತಂತಾಯಿತು. ಆಗ ಗುರುದೇವರು ಒಂದು ಚಮಚದಿಂದ ಮೊಟ್ಟೆಯ ಚೂರುಗಳನ್ನು ತೆಗೆದು, ಪಕ್ಕಕ್ಕೆ ಇರಿಸಿ, ತಿನ್ನಲು ಪ್ರಾರಂಭಿಸಿದರು. ಉಳಿದವರೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟು ಅವರನ್ನು ಅನುಕರಿಸಿದರು.ನಂತರ, ಒಬ್ಬ ಭಕ್ತನು ಬಂದು ಸ್ವಾಮೀಜಿ ಇದನ್ನು ಹೇಗೆ ಸಹಿಸಿಕೊಂಡಿರಿ? ಎಂದ.

ಅವರು, ‘ನೋಡು, ನನ್ನ ಹೊರತಾಗಿ, ಗುಂಪಿನಲ್ಲಿ ಇನ್ನೂ ಮೂವರು ಮಧುಮೇಹಿಗಳಿದ್ದಾರೆ, ಮತ್ತು ಅವರೆಲ್ಲರೂ ವೃದ್ಧರು. ನಾನು ಗಲಾಟೆ ಮಾಡಿದ್ದರೆ, ಯಾರೂ ಊಟ ಮಾಡುತ್ತಿರಲಿಲ್ಲ ಮತ್ತು ಅದು ಮಧುಮೇಹಿಗಳಿಗೆ ಅಪಾಯಕಾರಿ. ನೀವು ವಿಷಯಗಳನ್ನು ಹೇಗೆ ನೋಡುತ್ತೀರಿ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ನಿಮ್ಮ ಮನಸ್ಸು ಸ್ಪಷ್ಟ ಮತ್ತು ಶುದ್ಧವಾಗಿರುವವರೆಗೆ, ಈ ರೀತಿಯ ವಿಷಯಗಳು ನಿಮ್ಮನ್ನು ಎಂದಿಗೂ ತೊಂದರೆಗೊಳಿಸಬಾರದು’ ಎಂದರು. ಆದರೆ ಮನಸ್ಸನ್ನು ಶಾಂತವಾಗಿಡುವುದು ಈ ಜಗತ್ತಿನ ಅತ್ಯಂತ ಕಷ್ಟದ ಕೆಲಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net