13ರ ಸಂಜೆ 7ಕ್ಕೆ ಲಿಂಗ ಪೂಜೆ ಮಾಡಿ ಪ್ರಾರ್ಥಿಸಿ

page 6 4
Published on

ಶ್ರೀಶೈಲಂ: ಲಿಂಗ ಪೂಜೆ ಮಾಡುತ್ತಿರುವ ಪ್ರತಿಯೊಬ್ಬರೂ ಕರೊನಾ ವೈರಸ್ ನಿವಾರಣೆಗೆ ಏ.13ರ ಸಂಜೆ 7ಕ್ಕೆ ಲಿಂಗ ಪೂಜೆ ಮಾಡಿ ಪ್ರಾರ್ಥಿಸಬೇಕೆಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದ್ದಾರೆ.

ಸರ್ಕಾರಗಳು ಸಾಕಷ್ಟು ಕ್ರಮ ಕೈಗೊಂಡರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ವೈದ್ಯಕೀಯ ವಿಜ್ಞಾನ ಮುಂದುವರಿದರೂ ರೋಗ ನಿವಾರಿಸುವ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತ ದೇವರಲ್ಲಿ ಪ್ರಾರ್ಥಿಸುವುದೊಂದೇ ಮಾರ್ಗವಾಗಿದೆ.

‘ಇಷ್ಟಲಿಂಗಮಿದಂ ಸಾಕ್ಷಾದನಿಷ್ಟಪರಿಹಾರಕಂ’ ಎಂಬ ಸಿದ್ಧಾಂತ ಶಿಖಾಮಣಿಯ ಉಕ್ತಿಯಂತೆ ಇಷ್ಟಲಿಂಗದಲ್ಲಿ ಜಗತ್ತಿನ ಅನಿಷ್ಟಗಳನ್ನೆಲ್ಲ ನಷ್ಟಗೊಳಿಸುವ ಶಕ್ತಿಯಿದೆ. ವೀರಶೈವ ಲಿಂಗಾಯತರೆಲ್ಲರೂ ಆರಾಧ್ಯ ದೈವವಾದ ಇಷ್ಟಲಿಂಗವನ್ನು ಪ್ರತಿನಿತ್ಯ ಪೂಜಿಸುವಾಗ ರೋಗಾಣುವಿನಿಂದ ಜಗತ್ತನ್ನು ಸಂರಕ್ಷಿಸು ಎಂದು ತಪ್ಪದೇ ಪ್ರಾರ್ಥಿಸಬೇಕು ಎಂದು ತಿಳಿಸಿದ್ದಾರೆ.

ಸೋಮವಾರ ಸಂಜೆ ಏಕಕಾಲಕ್ಕೆ ಲಿಂಗಪೂಜೆ ಮಾಡಿ ಸಾಮೂಹಿಕವಾಗಿ ಕರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಬೇಕು. ಈಗಾಗಲೇ ನಾವು ಕರೊನಾ ನಿವಾರಣಾ ಪ್ರಾರ್ಥನಾ ಪಂಚಕ ರಚಿಸಿ ಎಲ್ಲರಿಗೂ ಪ್ರತಿನಿತ್ಯ ಪಠಿಸಲು ತಿಳಿಸಿದ್ದೇವೆ ಎಂದು ಜಗದ್ಗುರುಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net