ಮುರಿದು ಬಿದ್ದ ಕೇಬಲ್ ಬ್ರಿಡ್ಜ್​: ಕನಿಷ್ಠ 35 ಮಂದಿ ಸಾವು, ಸತ್ತವರ ಸಂಖ್ಯೆ ಏರುವ ಸಾಧ್ಯತೆ..

Cable Bridge
Published on

ಗುಜರಾತ್: ಇಲ್ಲಿನ ಮಾರ್ಬಿ ಪ್ರದೇಶದಲ್ಲಿ ಮಚ್ಚೂ ನದಿಗೆ ಅಡ್ಡಲಾಗಿ ಹಾಕಿರುವ ಕೇಬಲ್ ಬ್ರಿಡ್ಜ್ ಮುರಿದು ಬಿದ್ದಿದ್ದು, ಈ ಅವಘಡದಲ್ಲಿ ಕನಿಷ್ಠ 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಹಲವರು ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದ್ದು, ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇಂದು ಈ ಕೇಬಲ್ ಬ್ರಿಡ್ಜ್ ಮೇಲೆ 150 ಮಂದಿ ಇದ್ದಾಗ ಸಂಜೆ ಸುಮಾರು 6.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕೂಡಲೇ ಪ್ರಧಾನಿ ಮೋದಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರಿಂದ, ಘಟನೆ ಸಂಭವಿಸಿದ ಹದಿನೈದೇ ನಿಮಿಷಗಳಲ್ಲಿ ತುರ್ತು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ್​ ಸಾಂಘ್ವಿ ತಿಳಿಸಿದ್ದಾರೆ.

ಕನಿಷ್ಠ 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದ್ದು, ಮೃತಪಡುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಈ ಮಧ್ಯೆ ಗುಜರಾತ್ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.

ರಾಜ್ಯಕ್ಕೆ ಮೂರು ದಿನದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net