ಭಗತ್ ಸಿಂಗ್ ಪಾತ್ರಕ್ಕೆಂದು ರಿಹರ್ಸಲ್ ಮಾಡುತ್ತಿದ್ದ ಬಾಲಕ ನಿಜವಾಗಿಯೂ ಉರುಳಿಗೆ ಬಲಿಯಾದ!

Bhagath Singh
Published on

ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಾತ್ರದಲ್ಲಿ ಅಭಿನಯಿಸುವ ಸಲುವಾಗಿ ರಿಹರ್ಸಲ್ ಮಾಡುತ್ತಿದ್ದ ಬಾಲಕನೊಬ್ಬ ನಿಜವಾಗಿಯೂ ಉರುಳಿಗೆ ಬಲಿಯಾದ ದುರಂತವೊಂದು ಸಂಭವಿಸಿದೆ. ಕೋಟೆನಗರ ಚಿತ್ರದುರ್ಗದಲ್ಲಿ ಈ ದುರ್ಘಟನೆ ನಡೆದಿದೆ.

ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ನಿವಾಸಿ ಸಂಜಯ್​ ಗೌಡ (12) ದುರಂತ ಸಾವಿಗೀಡಾದ ಬಾಲಕ. ಈತ ಎಸ್​ಎಲ್​ವಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ರಾಜ್ಯೋತ್ಸವ ಸಂದರ್ಭದಲ್ಲಿನ ಪ್ರದರ್ಶನಕ್ಕಾಗಿ ತಯಾರಾಗುತ್ತಿದ್ದ ಈ ಬಾಲಕ ಅಚಾತುರ್ಯದಿಂದ ಪ್ರಾಣ ಕಳೆದುಕೊಂಡಿದ್ದಾನೆ.

ನ. 1ರಂದು ಭಗತ್​ ಸಿಂಗ್ ಪಾತ್ರ ಮಾಡಲು ಈತ ರಿಹರ್ಸಲ್ ಮಾಡುತ್ತಿದ್ದು, ನಿನ್ನೆ ಮನೆಗೆ ಬಂದ ಬಳಿಕವೂ ರಿಹರ್ಸಲ್ ನಡೆಸಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ರಿಹರ್ಸಲ್ ಮಾಡಲು ಮುಂದಾದ ಈತ ಫ್ಯಾನಿಗೆ ಹಗ್ಗ ಬಿಗಿದುಕೊಂಡು ಮಂಚದ ಮೇಲೆ ನಿಂತಿದ್ದ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಜಿಗಿದಿದ್ದಾನೆ. ಹೀಗಾಗಿ ಈತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಪಾಲಕರು ಮನೆಗೆ ಬಂದಾಗ ಬಾಲಕ ಸಂಜಯ್ ಸಾವಿಗೀಡಾಗಿದ್ದು ಗಮನಕ್ಕೆ ಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಪ್ರಕರಣದ ಕುರಿತು ಚಿತ್ರದುರ್ಗ ಬಡಾವಣೆ ಠಾಣೆಗೆ ಸಂಜಯ್ ಪೋಷಕರು ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳೆದ ವರ್ಷವೂ ನಡೆದಿತ್ತು ಇಂಥದ್ದೇ ಪ್ರಕರಣ: ಕಳೆದ ವರ್ಷ ಜುಲೈ ತಿಂಗಳಲ್ಲಿ ಇದೇ ಥರದ ಪ್ರಕರಣವೊಂದು ನಡೆದಿತ್ತು. ಉತ್ತರ ಪ್ರದೇಶದ ಬದಾಯೂ ಜಿಲ್ಲೆಯ ಕುನ್ವಾರ್ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವಕ್ಕಾಗಿ ಭಗತ್ ಸಿಂಗ್​ನನ್ನು ಗಲ್ಲಿಗೇರಿಸುವ ಕಿರುನಾಟಕದ ಪಾತ್ರಕ್ಕೆ ಆಯ್ಕೆಯಾದ 10 ವರ್ಷದ ಶಿವಂ ರಿಹರ್ಸಲ್​ಗೆಂದು ಸ್ಟೂಲ್​ ಮೇಲೆ ನಿಂತು ಕುತ್ತಿಗೆಗೆ ಕುಣಿಕೆ ಹಾಕಿಕೊಂಡಿದ್ದ. ಅದೇ ಸಂದರ್ಭದಲ್ಲಿ ಸ್ಟೂಲ್ ಜಾರಿ ಸಾವಿಗೀಡಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net